ಸಾಂಸ್ಕೃತಿಕ ಸಮನ್ವಯ- 2023 – ವರ್ಷದ – ಹರ್ಷ

ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಜೊತೆ ಪೋಷಕರೂ ಕೈ ಜೋಡಿಸಿ- ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್

ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಓದುವಿಕೆ ಮಾತ್ರ ಮುಖ್ಯ ಅಲ್ಲ, ಮಹಾನ್ ಸಾಧಕರ ಜೀವನ ಚರಿತ್ರೆ ಓದಲು ಪ್ರೋತ್ಸಾಹಿಸಬೇಕು. ಓದಿನ ಜೊತೆಗೆ ದೊಡ್ಡ ಸಾಧನೆಗಳನ್ನು ಮಾಡಲು ಪ್ರೋತ್ಸಾಹ ಕೊಡಬೇಕು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಹೇಳಿದರು. ಅವರು ಶಾಲೆಯ ವಾರ್ಷಿಕೋತ್ಸವದ ಸಾಂಸ್ಕöÈತಿಕ ಸಮನ್ವಯ – ೨೦೨೩ ವರ್ಷದ ಹರ್ಷ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ನೀವೆಲ್ಲಾ ಪೋಷಕರು ಕನ್ನಡ ಶಾಲೆಗೆ ಧೈರ್ಯ ಮಾಡಿ ಸೇರಿಸಿದಿರಿ ಇದು ಹೆಮ್ಮೆಯ ವಿಷಯ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಜೊತೆ ಪೋಷಕರೂ ಕೈಜೋಡಿಸಬೇಕು ಎಂದರು.

ಮಕ್ಕಳನ್ನು ಇತರ ಮಕ್ಕಳ ಜೊತೆ ತುಲನೆ ಮಾಡಬೇಡಿ- ಉಜ್ವಲ್ ಪ್ರಭು: ಶಾಲಾ ಹಿರಿಯ ವಿದ್ಯಾರ್ಥಿ, ಪುತ್ತೂರು ಯು.ಆರ್.ಪ್ರಾಪರ್ಟಿಸ್‍ನ ಉಜ್ವಲ್ ಕುಮಾರ್ ಪ್ರಭು ಮಾತನಾಡಿ ನನಗೆ ವೈಯಕ್ತಿಕವಾಗಿ ಸಂಸ್ಕಾರ ಹಾಗೂ ಸಮಯದ ಬೆಲೆ ಹೇಳಿಕೊಟ್ಟದ್ದು ಈ ಶಾಲೆ. ನನಗೆ ವಿದ್ಯೆ ಕಲಿಸಿದ ಶಿಕ್ಷಕರೂ ಈಗಲೂ ಇದ್ದಾರೆ. ಮಕ್ಕಳನ್ನು ಇತರ ಮಕ್ಕಳ ಜೊತೆ ತುಲನೆ ಮಾಡಬೇಡಿ ಎಂದರು. ಒಂದು ಗಿಡ ಬೆಳೆದು ಮರವಾಗಲು ತುಂಬಾ ಸಮಯ ಬೇಕು. ಹಾಗೆಯೇ ಸತತ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಸಂಸ್ಕಾರಯುತ ವಿದ್ಯೆ ಕಲಿಯಿರಿ- ಶಿವಶಂಕರ್ ನಾಯಕ್ : ಬೆಳ್ತಂಗಡಿಯ ರೈತಬಂಧು ಮಾಲಕ ಶಿವಶಂಕರ ನಾಯಕ್ ಮಾತನಾಡಿ ವಿದ್ಯಾರ್ಥಿಗಳು ಶೋಕಿ ಮಾಡಬಾರದು. ಎಲ್.ಕೆ.ಜಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ಮಕ್ಕಳು 24 ಕ್ಯಾರೆಟ್ ನಂತಿರುವ ಮಕ್ಕಳು. ಇವರನ್ನು ಒಳ್ಳೆಯ ರೀತಿ ತಿದ್ದಬೇಕು. ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿನ ವ್ಯವಸ್ಥೆಗಳು ನನಗೆ ಸಂತೊಷ ತಂದಿದೆ. ನಮಗೆ ನೀಡಿದ ಆತಿಥ್ಯ ಸಂಸ್ಕಾರಯುತವಾಗಿತ್ತು ಎಂದರು. ಮಕ್ಕಳನ್ನು ಕಲಿಯುವಷ್ಟು ಕಲಿಸಬೇಕು. ಎಂದರು.

ಸಮನ್ವಯದ ಹಿನ್ನೆಲೆಯ ಕಾರ್ಯಕ್ರಮ-ಡಾ.ಕೃಷ್ಣ ಭಟ್ : ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|ಕೃಷ್ಣ ಭಟ್ ಕೊಂಕೋಡಿ ಮಾತನಾಡಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಾರ್ಷಿಕೋತ್ಸವ ಎಂಬುದು ವಿಶೇಷ ಪೂರ್ಣವಾದ ಕಾರ್ಯಕ್ರಮ. ಇದು ಮಕ್ಕಳಿಗೆ ಚೈತನ್ಯ ನೀಡುವ ಕಾರ್ಯಕ್ರಮ. ಮಕ್ಕಳ ಪ್ರತಿಭೆಯನ್ನು ಗುರುತಿಸುವ ದಿನ. ಸಮನ್ವಯದ ಹಿನ್ನೆಲೆಯ ಕಾರ್ಯಕ್ರಮ ಇದಾಗಿದೆ ಎಂದರು. ಕನ್ನಡ ಮಾಧ್ಯಮ ಗ್ರಹಿಕೆಗೆ ಸುಲಭ. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಕೇಂದ್ರವಾಗಿಟ್ಟುಕೊಂಡು ಕನ್ನಡ ಮಾಧ್ಯಮ ಶಾಲೆಯನ್ನು ನಡೆಸುತ್ತಿದೆ. ಇವತ್ತು ಸುಮಾರು 800 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕರು ಪುಣ್ಯಕೋಟಿ ಇದ್ದಹಾಗೆ ಎಂದರು.

ಸಾಹಿತ್ಯ ಮಿತ್ರ ಬಿಡುಗಡೆ : ಲೇಖನ, ಚಿತ್ರಕಲೆ, ಕಥೆ ಇವುಗಳನ್ನೊಳಗೊಂಡ ವಾರ್ಷಿಕ ಸಂಚಿಕೆಯನ್ನು ಅತಿಥಿಗಳು ಅನಾವರಣ ಗೊಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.ಶಾಲಾ ಚಿತ್ರಕಲಾ ಶಿಕ್ಷಕರಾದ ರಂಗಪ್ಪ ಮತ್ತು ಅಟಲ್ ಶಿಕ್ಷಕರಾದ ರೋಹಿತ್ ಇವರನ್ನು ಅಭಿನಂದಿಸಲಾಯಿತು. ಕಲಿಕೆಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾ ಮುಖ್ಯಗುರು ನಳಿನಿ ವಾಗ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ರೂಪಲೇಖಾ, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಂತ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಮೋದ್, ಶಾಲಾ ಸಹಜ – ಸಂಜೀವಿನಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಅನ್ನಪೂರ್ಣಾ ಸಮಿತಿ ಅಧ್ಯಕ್ಷ, ಸುಹಾಸ್ ಮಜಿ, ಪ್ರೌಢಶಾಲಾ ವಿದ್ಯಾರ್ಥಿ ನಾಯಕ, ಭವಿಷ್, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ಮುಕುಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಪ್ರೌಢವಿಭಾಗದ ಮುಖ್ಯಗುರು ಆಶಾ ಬೆಳ್ಳಾರೆ ವಾರ್ಷಿಕ ಚಟುವಟಿಕೆಗಳ ವರದಿ ತಿಳಿಸಿ ಶಾಲಾಭಿವೃದ್ಧಿಗೆ ಶ್ರಮಿಸಿದ ಎಲ್ಲರನ್ನು ಸ್ಮರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಸ್ವಾಗತಿಸಿ, ಆಡಳಿತ ಮಂಡಳಿ ಸದಸ್ಯರಾದ ಡಾ. ಆಶಾ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮವನ್ನು ಶಿಕ್ಷಕರಾದ ಚಂದ್ರಶೇಖರ ಸುಳ್ಯಪದವು ಮತ್ತು ರಾಜೇಶ್ ನಂದಿಲ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin