ಮಾಹಿತಿ ಕೈಪಿಡಿ

ಶಾಲಾ ಧ್ಯೇಯ: ಧಿಯೋ ಯೋ ನಃ ಪ್ರಚೋದಯಾತ್

IMG_0006

ಆಶಯ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ 1993 ರಲ್ಲಿ ಆರಂಭವಾದ ವಿದ್ಯಾದೇಗುಲವೇ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ. ಇಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಒಟ್ಟಾಗಿ ಸಹಶಿಕ್ಷಣವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹವನ್ನು ತುಂಬುವುದು ನಮ್ಮ ಸಂಸ್ಥೆಯ ಮುಖ್ಯ ಗುರಿ. ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯ ಬಗ್ಗೆ ಶ್ರದ್ಧೆ, ವಿಶ್ವಾಸ, ಶಿಸ್ತುಬದ್ಧ ನಡವಳಿಕೆಯಿಲ್ಲದೆ ಇಂದಿನ ಅಗತ್ಯವಾದ ಮಾತೃಭೂಮಿಯ ಬಗೆಗೆ ಯುವಜನಾಂಗದಲ್ಲಿ ನಿಷ್ಠೆ ಮತ್ತು ಕರ್ತವ್ಯಪ್ರಜ್ಞೆಯನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಿ ತಾಯಿ ಭಾರತೀಯ ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ. ಚಿನ್ನದ ಅದಿರನ್ನು ಸಂಸ್ಕರಿಸಿ ಶುದ್ಧಚಿನ್ನವನ್ನು ಪಡೆಯುವಂತೆ, ಶಿಕ್ಷಣದ ವಿಧಿವಿಧಾನಗಳು, ಕ್ರಿಯೆ-ಪ್ರಕ್ರಿಯೆಗಳು ಅಂತರಂಗ ಸಂಸ್ಕರಣಗೈದು ವ್ಯಕ್ತಿಯ ಆಂತರ್ಯದಲ್ಲಿನ ಪಶುತ್ವವನ್ನು ನೀಗಿಸಿ, ದೈವತ್ವವನ್ನು ಪ್ರಚೋದಿಸಿ ಆತ್ಮಶಕ್ತಿ ಹೊಮ್ಮುವಂತೆ ಮಾಡುತ್ತವೆ. ಅದರಿಂದಾಗಿ ವ್ಯಕ್ತಿಯ ಚಾರಿತ್ರ್ಯ ಸಂವರ್ಧಿಸುತ್ತದೆ, ಪ್ರತಿಭೆ ಅರಳುತ್ತದೆ, ಕೌಶಲ್ಯ ವೃದ್ಧಿಸುತ್ತದೆ, ಆತ್ಮವಿಶ್ವಾಸ ಕುದುರುತ್ತದೆ, ಮಹತ್ತರವಾದುದನ್ನು ಸಾಧಿಸಬೇಕೆಂಬ ಕೆಚ್ಚು ಉಕ್ಕುತ್ತದೆ, ತನ್ನ ಕಾಲಮೇಲೆ ತಾನೇ ನಿಂತು ಇನ್ನೊಬ್ಬರಿಗೆ ಒಳಿತನ್ನುಂಟುಮಾಡಬೇಕೆಂಬ ತುಡಿತ ಮಿಡಿಯುತ್ತದೆ. ಹೀಗೆ ವ್ಯಕ್ತಿಯ ದೈಹಿಕ, ಬೌದ್ಧಿಕ, ನೈತಿಕ, ಆಧ್ಯಾತ್ಮಿಕ ವಿಕಾಸಕ್ಕೆಡೆಮಾಡಿ, ಆತ ಚೆನ್ನಾಗಿ ಬದುಕುವಂತೆ ಮಾಡುವುದೇ ಶಿಕ್ಷಣ. ಇಂತಹ ಯೋಗ್ಯ ವ್ಯಕ್ತಿ ನಿರ್ಮಾಣವೇ ಶಿಕ್ಷಣದ ಧ್ಯೇಯೋದ್ದೇಶ.

ಶಾಲಾ ಧ್ಯೇಯ:
1. ಭಾರತೀಯ ಸಂಸ್ಕೃತಿಯನ್ನೊಳಗೊಂಡ ಸರಳ, ಆಧುನಿಕ ಶಿಕ್ಷಣವನ್ನು ಒದಗಿಸುವುದು.
2. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಶ್ರದ್ಧೆ, ಭಕ್ತಿ, ರಾಷ್ಟ್ರಸೇವೆಯ ಚೈತನ್ಯವನ್ನು ಮೂಡಿಸುವುದು.
3. ವಿದ್ಯಾರ್ಥಿಗಳಲ್ಲಿ ಐಕ್ಯತೆ, ಒಳ್ಲೆಯ ನಡತೆ, ಹೊಂದಾಣಿಕೆ, ಸದಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದು.

ನಮ್ಮ ವಿದ್ಯಾಸಂಸ್ಥೆಯಲ್ಲಿ:

1. ನೈತಿಕ ಮೌಲ್ಯಾಧಾರಿತ ಶಿಕ್ಷಣ, ಸಾಮಾನ್ಯ ಜ್ಞಾನ, ದೇಶಭಕ್ತಿ, ಮಹಾತ್ಮರ ಜೀವನ ಚರಿತೆ ಮುಂತಾದ ಶಿಕ್ಷಣವನ್ನು ನೀಡಲಾಗುವುದು.
2. ಭಗವದ್ಗೀತೆ, ಸುಭಾಷಿತಗಳನ್ನು ಕಲಿಸುವುದು ಹಾಗೂ ಸಾಪ್ತಾಹಿಕ ಭಜನೆಗಳನ್ನು ನಡೆಸಲಾಗುವುದು.
3. ರಾಷ್ಟ್ರೀಯ ಹಬ್ಬಗಳಲ್ಲದೆ, ಸಾಂಸ್ಕೃತಿಕ ಹಬ್ಬಗಳಾದ ಗುರುವಂದನೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ವಿವೇಕಾನಂದ ಜಯಂತಿಯನ್ನು ಆಚರಿಸಲಾಗುವುದು.
4. ಶೈಕ್ಷಣಿಕ ಪ್ರವಾಸಗಳು ಹಾಗೂ ಪರಿಣತರಿಂದ ಮಾನವ ಸಂಪದಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನಡೆಸಲಾಗುವುದು.
5. ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುವುದು ಹಾಗೂ ಪರೀಕ್ಷಾ ತಯಾರಿ ತರಬೇತಿಗಳನ್ನು ನಡೆಸಲಾಗುವುದು.
6. ವಿದ್ಯಾರ್ಥಿಗಳ ಸರ್ವಾಂಗೀಣ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಎಲ್ಲಾ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳ ವ್ಯವಸ್ಥೆಯನ್ನು ಒದಗಿಸಲಾಗುವುದು.

ದಾಖಲಾತಿ ಕ್ರಮ ನಿಯಮ:
ಮೇ 30 ಕ್ಕೆ 5 ವರ್ಷ ಮೇಲ್ಪಟ್ಟ ಮಗುವನ್ನು 1 ನೇ ತರಗತಿಗೆ ನಿಯಮ ಪ್ರಕಾರ ದಾಖಲಾತಿ ಮಾಡಿಕೊಳ್ಳಲಾಗುವುದು. ವಿದ್ಯಾರ್ಥಿಯ ಹೆತ್ತವರು ಅಥವಾ ಪೋಷಕರು ಮಗುವಿನ ಕಲಿಕೆ, ಹಾಜರಾತಿ ಮತ್ತು ಶಾಲೆಯ ಹೊರಗಿನ ಮಗುವಿನ ಗುಣನಡತೆ ಬಗ್ಗೆ ಜವಾಬ್ದಾರರಾಗಿರಬೇಕು.

ದಾಖಲಾತಿ ಸಮಯದಲ್ಲಿ ಪೋಷಕರು/ ಹೆತ್ತವರು ಅರ್ಜಿ ಫಾರಂನ್ನು ಸರಿಯಾಗಿ ಭರ್ತಿಮಾಡಿ ಜೊತೆಗೆ ಜನನ ದಾಖಲೆ ಪತ್ರವನ್ನು ಲಗತ್ತೀಕರಿಸಬೇಕು.

ಇತರ ಶಾಲೆಯಿಂದ ಬರುವ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣ ಪತ್ರದ ಮೂಲಪ್ರತಿಯನ್ನು ನೀಡಬೇಕು.

ಹೊರ ತಾಲೂಕಿನಿಂದ ಬರುವಂತಹ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣ ಪತ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿ ಹಾಗೂ ಒಹರನ್ನು ಹಾಕಿಸಿರಬೇಕು.

ಹೆತ್ತವರು ಮತ್ತು ಪೋಷಕರು ಗಮನಿಸಬೇಕಾದ ಅಂಶಗಳು:
1. ನಿಮ್ಮ ಮಕ್ಕಳನ್ನು ಶಾಲೆಯ ದ್ವಾರದಲ್ಲೇ ನಮ್ಮ ಜವಾಬ್ದಾರಿಗೆ ಬಿಡಬೇಕು. ಪಾಠದ ಕೊಠಡಿಯವರೆಗೆ ಬರಬಾರದು.
2. ಪ್ರಾರ್ಥನೆ, ದೈಹಿಕ ಶಿಕ್ಷಣ ಅಭ್ಯಾಸಕ್ಕಾಗಿ ಶಾಲಾ ಪ್ರಾಂಗಣವು ಖಾಲಿಯಿರಬೇಕು. ಇಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಬಾರದು.
3. ಕೊನೆಯ ಗಂಟೆಯನ್ನು ಹೊಡೆದ ಅನಂತರ ವಿದ್ಯಾರ್ಥಿ/ನಿಯು ಮೊದಲೇ ಗೊತ್ತುಪಡಿಸಿದ ಸ್ಥಳಕ್ಕೆ ತರಗತಿಯಿಂದ ಬರಬೆಕು. ಅಲ್ಲಿಯವರೆಗೂ ಪೋಷಕರು ಹೊರಗೆ ಕಾಯುತ್ತಿರಬೇಕು. ನೇರವಾಗಿ ತರಗತಿಗೆ ಹೋಗಬಾರದು.
4. ಶಾಲಾ ಕೊನೆಯ ಗಂಟೆ ಹೊಡೆದ ಬಳಿಕ 30  ನಿಮಿಷದೊಳಗೆ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಬೇಕು.
5. ಪಾಠದ ಸಮಯದಲ್ಲಿ ನಿಮ್ಮ ಮಕ್ಕಳನ್ನು ತರಗತಿಯಿಂದ ಹೊರಗೆ ಕರೆಯುವುದು ಸೂಕ್ತವಲ್ಲ.
6. ಹೆತ್ತವರ/ಪಾಲಕರ ಸಭೆಗಳಿಗೆ ಅಗತ್ಯವಾಗಿ ಹಾಜರಿರಬೇಕು. ಶಾಲಾ ಕ್ಯಾಲೆಂಡರ್ನ್ನು ಸಂಬಂಧಪಟ್ಟ ವಿದ್ಯಾರ್ಥಿಗಳ ಪಾಲಕರು/ಹೆತ್ತವರು ಆಗಾಗ ಪರಿಶೀಲಿಸುತ್ತಿರಬೇಕು.
7. ಶಾಲಾ ವಾಹನ ಹೊರತುಪಡಿಸಿ ರಿಕ್ಷಾ, ಕಾರು ಮುಂತಾದ ಖಾಸಗಿ ವಾಹನಗಳಲ್ಲಿ ಬರುವಂತಹ ವಿದ್ಯಾರ್ಥಿಗಳ ಪೋಷಕರು ವಾಹನ ಚಾಲಕರೊಂದಿಗೆ ಆಗಾಗ್ಗೆ ಮಕ್ಕಳ ಸುರಕ್ಷತೆಯ ಬಗ್ಗೆ ಸಂವಹನ ನಡೆಸುತ್ತಿರಬೇಕು.
8. ವಿದ್ಯಾರ್ಥಿಗಳ ಸಾಮಾನ್ಯ ಸಮಸ್ಯೆಗಳಾದ ಭಯ, ಉದ್ವೇಗ, ಸಿಟ್ಟು, ಹತಾಶೆ, ಕೀಳರಿಮೆ, ಸೋಮಾರಿತನ, ಏಕಾಗ್ರತೆಯ ಕೊರತೆ, ಮುಂದೂಡುವ ಪ್ರವೃತ್ತಿ ಮುಂತಾದವುಗಳ ಬಗ್ಗೆ ಸದಾ ಗಮನಿಸಿ ಸೂಕ್ತ ಸಂವಹನ ಮೂಲಕ ಅವುಗಳನ್ನು ಹೋಗಲಾಡಿಸಲು ಸಹಕರಿಸಬೇಕು ಹಾಗೂ ಈ ವಿಚಾರಗಳ ಬಗ್ಗೆ ತರಗತಿ ಅಧ್ಯಾಪಕರು ಮುಖ್ಯೋಪಾಧ್ಯಾಯರ ಜೊತೆ ನಿಕಟ ಸಂಪರ್ಕವಿರಿಸಿಕೊಳ್ಳಬೇಕು.
9. ರೇಡಿಯೋ, ಟಿ.ವಿ, ಪತ್ರಿಕೆ ಮುಂತಾದ ಸಮೂಹ ಮಾಧ್ಯಮಗಳಲ್ಲಿ ಕ್ವಿಜ್, ವಾರ್ತೆಗಳು, ವಿಜ್ಞಾನ, ಚರ್ಚೆ, ಪ್ರಾಪಂಚಿಕ ಜ್ಞಾನ, ಆಧ್ಯಾತ್ಮಿಕ ಚಿಂತನೆ ಮುಂತಾದವುಗಳಿಗೆ ಪ್ರಾಮುಖ್ಯತೆ ನೀಡಬೇಕು.
10. ಮನೆಯಲ್ಲಿ ಮಕ್ಕಳೆದುರು ನಮ್ಮ ವರ್ತನೆಗಳು ಮಾದರಿಯಾಗಿರಲಿ. ಒಂದು ಉತ್ತಮ ದಿನಚರಿಯನ್ನು ಆಟೋಟ ಪರಿಸರ ಮತ್ತಿತರ ಚಟುವಟಿಕೆಗಳ ಸಹಿತ ನಿಮ್ಮ ಮಗುವಿಗೆ ನೀಡಿ.
11. ಸಂಸ್ಕಾರ ಬೆಳೆಸುವ , ನಿತ್ಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳೊಂದಿಗೆ ಒಟ್ಟಾಗಿ ಭಾಗವಹಿಸಿ. ಊಟ ಉಪಾಹರಗಳನ್ನೂ ಮಕ್ಕಳೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಏಕಕಾಲದಲ್ಲಿ ಒಟ್ಟಾಗಿ ಮಾಡುವುದರ ಜೊತೆಗೆ ಮನೆಯ ದೈನಂದಿನ ಸಣ್ಣಪುಟ್ಟ ಕೆಲಸಗಳನ್ನು ಮಕ್ಕಳೊಂದಿಗೆ ಹಂಚುವುದರ ಮೂಲಕ ಸ್ವಲ್ಪ ಮಟ್ಟಿನ ಜವಾಬ್ದಾರಿ ಕಲಿಸಿದಂತಾಗುವುದು.
12. ದಿಟ್ಟ ನಡೆನುಡಿಯ, ಗುರುಹಿರಿಯರಿಗೆ ಗೌರವ ಕೊಡುವ ದೃಢ ಆತ್ಮವಿಶ್ವಾಸದ ಓರ್ವ ಉತ್ತಮ ವಿದ್ಯಾವಂತ ನಾಗರಿಕನಾಗಲು ಮನೆಯೇ ಮೊದಲ ಪಾಠಶಾಲೆ-ಜನನಿ ತಾನೆ ಮೊದಲ ಗುರುವು ಎಂಬುದು ಸರ್ವವಿಧಿತ.

 ಶುಲ್ಕದ ವಿವರ:

ನಿಗದಿ ಪಡಿಸಿದ ಶಾಲಾ ಶುಲ್ಕವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಪೂರ್ಣವಾಗಿ ಅಥವಾ ನಾಲ್ಕು ತಿಂಗಳಿಗೆ ಒಂದು ಬಾರಿಯಂತೆ ವರ್ಷಕ್ಕೆ ಮೂರು ಕಂತುಗಳಾಗಿ ಪಾವತಿಸಿ ಸಹಕರಿಸಬೇಕು. ಮರು ದಾಖಲಾತಿ ಶುಲ್ಕವನ್ನು ಎಪ್ರಿಲ್ ತಿಂಗಳಲ್ಲೇ ಪಾವತಿಸಬೇಕು. ಇದು ಅನುದಾನರಹಿತ ಸಂಸ್ಥೆ. ಶುಲ್ಕದಲ್ಲಿ ಬದಲಾವಣೆಗಳು ಆದಲ್ಲಿ ಸಹಕರಿಸಬೇಕು.

ಅನುಶಾಸನ:
1. ಎಲ್ಲಾ ಮಕ್ಕಳು ಬೆಳಗ್ಗೆ ಗಂಟೆ 9-00 ಕ್ಕೆ ಶಾಲೆಯಲ್ಲಿ ಇರಬೇಕು.
2. ಸಂಜೆ ಶಾಲಾ ಅವಧಿಯ ಬಳಿಕ ಅವಸರ ಮಾಡದೆ, ನಿಧಾನವಾಗಿ ಶಿಸ್ತಿನಿಂದ ಶಾಲೆಯಿಂದ ಹೊರಡುವುದು. ಈ ಬಗ್ಗೆ ಖಾಸಗಿ ವಾಹನ ಚಾಲಕರಿಗೆ ಅವಸರ ಮಾಡದಂತೆ ಮುಂದಾಗಿ ತಿಳಿಸಬೇಕು.
3. ಶಾಲಾ ಸಂಕೀರ್ಣದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕ/ಶಿಕ್ಷಕೇತರರೊಂದಿಗೆ ವಿದ್ಯಾರ್ಥಿಗಳು ಸೌಜನ್ಯದಿಂದ ವರ್ತಿಸಬೇಕು.
4. ಪ್ರತಿಯೊಬ್ಬ ವಿದ್ಯಾರ್ಥಿಯು ಸೌಜನ್ಯ, ನಮ್ರತೆ, ಶಿಸ್ತು ಮತ್ತು ಉತ್ತಮ ನಡತೆಯನ್ನು ಅಳವಡಿಸಿಕೊಳ್ಳಬೇಕು.
5. ಬೆಲೆಬಾಳುವ ಆಭರಣ ಧರಿಸಿ ಶಾಲೆಗೆ ಬರಬಾರದು. ಹೆಚ್ಚಿನ ಮೊತ್ತದ ನಗದು ಹಣ ಹಾಗೂ ಮೊಬೈಲ್, ಸಿ.ಡಿ. ಐಪ್ಯಾಡ್, ಕೆಮಾರಾ, ಸೌಂದರ್ಯ ಸಾಮಾಗ್ರಿಗಳನ್ನು ಶಾಲೆಗೆ ತರಬಾರದು.
6. ಪಠ್ಯಕ್ರಮಕ್ಕೆ ಸಂಬಂಧಿಸಿದ ಚಿತ್ರಗಳು, ಆಟಿಕೆಗಳು, ನಿಯತಕಾಲಿಕಗಳು ಇತ್ಯಾದಿಗಳನ್ನು ಶಾಲೆಗೆ ತರಬಾರದು.
7. ಅನುಚಿತವಾಗಿ ವರ್ತಿಸುವ ವಿದ್ಯಾರ್ಥಿಗಳ ಬಗ್ಗೆ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು.
8. ವಿದ್ಯಾರ್ಥಿಗಳು ವಿದ್ಯಾಸಂಸ್ಥೆಗೆ ಸಂಬಂಧಿಸಿದ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.
9. ವಿದ್ಯಾರ್ಥಿಗಳು ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಪಠ್ಯಪೂರಕ ಚಟುವಟಿಕೆಗಳಲ್ಲಿ ಜಾಗ್ರತೆಯಿಂದ ಹಿಂತಿರುಗಿಸಬೇಕು.
10. ವಾಚನಾಲಯದಿಂದ ತೆಗೆದುಕೊಂಡ ಪುಸ್ತಕ, ಪತ್ರಿಕೆ ಮೊದಲಾದವುಗಳನ್ನು ಜಾಗ್ರತೆಯಿಂದ ಹಿಂದಿರುಗಿಸಬೇಕು.
11. ಪುಸ್ತಕಗಳನ್ನು ಹಾಳು ಮಾಡಿದಲ್ಲಿ ಅಥವಾ ಹಿಂದಕ್ಕೆ ಕೊಡಲು ತಪ್ಪಿದಲ್ಲಿ ಮುಖ್ಯೋಪಾಧ್ಯಾಯರು ವಿಧಿಸಬಹುದಾದ ದಂಡನೆಗೆ ಒಳಗಾಗಬೇಕು.
12. ಹುಟ್ಟುಹಬ್ಬದಂದು ತರಗತಿಯಲ್ಲಿ ಮಕ್ಕಳಿಗೆ ಸಿಹಿತಿಂಡಿ ಹಂಚುವುದನ್ನು ನಿಷೇಧಿಸಲಾಗಿದೆ. ಅದರ ಬದಲು ಜೀವನಮೌಲ್ಯವನ್ನು ತಿಳಿಸುವ ಒಳ್ಳೆಯ ಒಂದು ಪುಸ್ತಕವನ್ನು ಶಾಲಾ ವಾಚನಾಲಯಕ್ಕೆ ನೀಡುವುದು ಸೂಕ್ತ.
13. ವಾರದ ಎಲ್ಲಾ ದಿನಗಳಲ್ಲಿ ವಿದ್ಯಾರ್ಥಿಗಳು ಗೊತ್ತುಪಡಿಸಿದ ಶುಚಿಯಾದ ಸಮವಸ್ತ್ರವನ್ನು ಧರಿಸಬೇಕು. 1 ರಿಂದ 5 ನೇ ತರಗತಿಯವರೆಗಿನ ಹುಡುಗರು ಕಡುಕೆಂಪು ಬಣ್ಣದ ಚಡ್ಡಿ ಮತ್ತು ಕಡುಕೆಂಪು-ಬಿಳಿ ಚೌಕಳಿಯುಳ್ಳ ಅಂಗಿಯನ್ನು , ಹುಡುಗಿಯರು ಬಿಳಿ ಕುಪ್ಪಸ ಮತ್ತು ಬಿಳಿ- ಕಡುಕೆಂಪು ಚೌಕಳಿಯ ಲಂಗವಲ್ಲದೆ ತಲೆಗೆ ಬಿಳಿ ಬಣ್ಣದ ರಿಬ್ಬನ್ ಧರಿಸಬೇಕು. 6 ನೇ ತರಗತಿಯಿಂದ ಮೇಟ್ಟ ಎಲಬಾಲಕರು ಕಡುಕೆಂಪು ಬಣ್ಣದ ಪ್ಯಾಂಟ್ ಮತ್ತು ಕಡುಕೆಂಪು – ಬಿಳಿ ಚೌಕಳಿಯುಳ್ಳ ಅಂಗಿಯನ್ನು, ಹಾಗೆಯೇಬಾಲಕಿಯರು ಚೂಡಿದಾರ (ಕಡುಕೆಂಪು ಬಣ್ಣದ ಪ್ಯಾಂಟ್, ಕಡುಕೆಂಪು – ಬಿಳಿ ಚೌಕಳಿಯ ಟಾಪ್, ಕಡುಕೆಂಪು ಬಣ್ಣದ ಶಾಲು, ಬಿಳಿ ರಿಬ್ಬನ್) ಧರಿಸಬೇಕು. 5 ರಿಂದ 10 ನೇ ತರಗತಿಯ ಹುಡುಗಿಯರು 2 ಜಡೆಯನ್ನು ಬಿಳಿ ರಿಬ್ಬನ್ ಹಾಕಿ ಮೇಲಕ್ಕೆ ಕಟ್ಟಬೇಕು. ಎಲ್ಲಾ ವಿದ್ಯಾರ್ಥಿಗಳೂ ಸೊಂಟಪಟ್ಟಿಯನ್ನು ಧರಿಸಬೇಕು.
14. ಅಪರಿಚಿತರೊಂದಿಗೆ ಯಾವುದೇ ವ್ಯವಹಾರ ಮಾಡಬಾರದು. ಅಲ್ಲದೆ, ಅಂತವರಿಂದ ಯಾವುದೇ ಕೊಡುಗೆಗಳನ್ನು ಸ್ವೀಕರಿಸಬಾರದು. ಇಂತಹ ವ್ಯಕ್ತಿಗಳು ಶಾಲಾ ಆವರಣದಲ್ಲಿ ಕಂಡುಬಂದಲ್ಲಿ ತಕ್ಷಣ ಅಧ್ಯಾಪಕರ ಗಮನಕ್ಕೆ ತರಬೇಕು.
15. ವಿದ್ಯಾರ್ಥಿಗಳು ಗೈರುಹಾಜರಾದ ಸಂದರ್ಭದಲ್ಲಿ ಪೋಷಕರ ಸಹಿ ಇರುವ ರಜಾಅರ್ಜಿಯನ್ನು ತರಬೇಕು.

 ಸೌಲಭ್ಯಗಳು:

ನಮ್ಮಲ್ಲಿ ಶುದ್ಧವಾದ ಕುಡಿಯುವ ನೀರು, ಸ್ಮಾರ್ಟ್ ಕ್ಲಾಸ್, ವಿಶಾಲವಾದ ಗ್ರಂಥಾಲಯ, ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಗಣಕಯಂತ್ರ ಕಲಿಕಾ ವಿಭಾಗಗಳಿವೆ. ವಿಶಾಲವಾದ ಸುವ್ಯವಸ್ಥಿತ ಆಟದ ಮೈದಾನ, ನೂತನ ಕ್ರೀಡಾ ಸಾಮಗ್ರಿಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಲಭ್ಯವಿದೆ. ವಿದ್ಯಾರ್ಥಿಗಳು ಶಾಲೆಗೆ ಬರಲು ಅನುಕೂಲವಾಗುವಂತೆ ವಿವಿಧ ದಿಕ್ಕುಗಳಿಗೆ ಸುಸಜ್ಜಿತ ಶಾಲಾ ಬಸ್ಸುಗಳ ಸೌಲಭ್ಯವಿದೆ.

ಪಠ್ಯಪೂರಕ ಚಟುವಟಿಕೆಗಳು:
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಲಿಕೆ ಹೊರತು ವಿವಿಧ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಬೇಕು ಎಂಬ ಉದ್ದೇಶಕ್ಕಾಗಿ ಯೋಗ, ಸಂಗೀತ, ಭರತನಾಟ್ಯ, ಕರಾಟೆ, ಈಜು, ರಂಗನಾಟಕ, ಯಕ್ಷಗಾನ, ಚೆಂಡೆ, ಕರಕುಶಲ ಕಲೆ, ಕೀಬೋರ್ಡ್, ಚಿತ್ರಕಲೆ, ಚೆಸ್, ಕ್ರೀಡೆಗಳ ವಿಶೇಷ ತರಬೇತಿಗಳಿವೆ. ವಿದ್ಯಾರ್ಥಿಗಳ ಸಾಹಿತ್ಯ, ಕಲಾ ಚಟುವಟಿಕೆಗೆ ‘ಸಾಹಿತ್ಯ ಮಿತ್ರ’ ಸಂಚಿಕೆಯು ವೇದಿಕೆಯನ್ನೊದಗಿಸುತ್ತಿದೆ. ‘ವಿವೇಕೋತ್ಸವ’ ದ ಹೆಸರಿನಲ್ಲಿ ನಡೆಯುವ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವು ಜನಮನ್ನಣೆಗೆ ಪಾತ್ರವಾಗುತ್ತಿದೆ. ಸ್ಕೌಟ್ಸ್, ಗೈಡ್ಸ್, ಕಬ್ಸ್ ಮತ್ತು ಬುಲ್ ಬುಲ್ಸ್ ಇಷ್ಟೇ ಅಲ್ಲದೆ ಇಕೋ ಕ್ಲಬ್, ಸಾಹಿತ್ಯ ಸಂಘ, ವಿಜ್ಞಾನ, ಸಂಸ್ಕೃತ ಸಂಘ, ಶಾಲಾ ಸಮ್ಸತ್ತು, ಇಂಟರ್ಯಾಕ್ಟ್ ಸಂಘ ಇಂಗ್ಲಿಷ್ ಕ್ಲಬ್, ಕಲೆಗಳಿಗೆ ಅನುಕೂಲಕರವಾದ ತರಬೇತಿಗಳು ಇವೆ.

ವಿದ್ಯಾರ್ಥಿಯು ಶಾಲೆಯನ್ನು ಬಿಟ್ಟು ಹೋಗುವಾಗ:
1. ವರ್ಗಾವಣೆ ಪ್ರಮಾಣಪತ್ರವನ್ನು ಪಡೆಯಲು ವಿದ್ಯಾರ್ಥಿಯ ಹೆತ್ತವರು/ಪೋಷಕರು ಅರ್ಜಿ ಸಲ್ಲಿಸಬೇಕು.
2. ಅರ್ಜಿ ಸಲ್ಲಿಸಿದ 24 ಗಂಟೆಯ ಅನಂತರ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡಲಾಗುವುದು.
3. ಸಂಸ್ಥೆಗೆ ಬಾಕಿಯಿರುವ ಮೊತ್ತವನ್ನು ಪೂರ್ಣವಾಗಿ ಪಾವತಿಸಿದ ಅನಂತರವೇ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡಲಾಗುವುದು.
4. ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ವಿದ್ಯಾರ್ಥಿಗಳು ‘ಹಿರಿಯ ವಿದ್ಯಾರ್ಥಿ ಸಂಘ’ದ ಸದಸ್ಯರಾಗಬೇಕು ಎಂಬುದು ನಮ್ಮ ನಿಯಮ./

ಸಂದರ್ಶನದ ಸಮಯ:

ಹೆತ್ತವರು ಮುಖ್ಯೋಪಾಧ್ಯಾಯರನ್ನು ಸೋಮವಾರದಿಂದ ಶುಕ್ರವಾರದವರೆಗೆ ಅಪರಾಹ್ನ 3-00 ರಿಂದ 4-00 ಗಂಟೆಯ ವರೆಗೆ ಭೇಟಿಯಾಗಬಹುದು ಮತ್ತು ತರಗತಿ ಅಧ್ಯಾಪಕರನ್ನು ಸಂಪರ್ಕಿಸಬೇಕಾದಲ್ಲಿ ಪ್ರತಿ ಶನಿವಾರ ಮಧ್ಯಾಹ್ನ ಗಂಟೆ 1-00 ರಿಂದ 2-30 ಗಂಟೆಯವರೆಗೆ ಭೇಟಿಯಾಗಬಹುದು.

ಶಾಲೆಯಲ್ಲಿ ನಡೆಸುವ ವಿವಿಧ ಪರೀಕ್ಷೆಗಳು:
1. ಎನ್.ಟಿ.ಎಸ್.ಇ
2. ನವೋದಯ
3. ರಾಮಾಯಣ ಮತ್ತು ಮಹಾಭಾರತ
4. ಸಂಸ್ಕೃತಿ ಜ್ಞಾನ ಪರೀಕ್ಷೆ
5. ಶ್ರೀಕೃಷ್ಣ ಪರೀಕ್ಷೆ
6. ಮೌಲ್ಯಾಧಾರಿತ ನೈತಿಕ ಶಿಕ್ಷಣ ತರಬೇತಿ ಪರೀಕ್ಷೆ (ಶಾಂತಿವನ ಟ್ರಸ್ಟ್, ಧರ್ಮಸ್ಥಳ, ಭಾರತ ಪ್ರಕಾಶನ)
7. ಡ್ರಾಯಿಂಗ್ ಗ್ರೇಡ್ ಪರೀಕ್ಷೆಗಳು
8. ಹಿಂದಿ ಗ್ರೇಡ್ ಪರೀಕ್ಷೆಗಳು

Sahithya_Mitra-2

Highslide for Wordpress Plugin