ನವದಂಪತಿ ಸಮಾವೇಶ

                                    ಜಗತ್ತಿಗೇ ಮಾರ್ಗದರ್ಶನ ತೋರುವ ಶಕ್ತಿ ಭಾರತಕ್ಕಿದೆ- ಸು.ರಾಮಣ್ಣ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕರು

“ಗುರು ಹಿರಿಯರ ಆಶೀರ್ವಾದ ಪಡೆಯುವ ವಧೂವರರಿಗೆ ಸಂಸ್ಕಾರವನ್ನು ಕೊಡುವ ಒಂದು ವಿಧಿಯೇ ಮದುವೆ. ಪ್ರಕೃತಿಯ ಶಿಶುವಾದ ಮಾನವನು ಸಂಸ್ಕೃತಿಯಿಂದ ವಿಕಸಿತನಾಗಿ , ವಿಕೃತಿಯೆಡೆಗೆ ಜಾರದಂತೆ ಧರ್ಮಾಚರಣೆಯಲ್ಲಿ ತೊಡಗಿ ಸಮೃದ್ಧಿ, ಸಂಸ್ಕೃತಿ ಎರಡರಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕು. ಮಾತೃಧರ್ಮ ಪಾಲನೆಯೊಂದಿಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡುತ್ತಾ, ಅವರನ್ನು ಕುಟುಂಬದ, ತನ್ಮೂಲಕ ದೇಶದ ಆಸ್ತಿಯನ್ನಾಗಿ ಮಾಡಬೇಕು. ಪರಂಪರೆ, ಸಂಪ್ರದಾಯಗಳಿಂದ ಒಡಗೂಡಿದ ಕುಟುಂಬಗಳಿರುವ ಭಾರತವು ಜಗತ್ತಿಗೇ ಮಾರ್ಗದರ್ಶನ ತೋರುವ ಶಕ್ತಿಯನ್ನು ಹೊಂದಿದೆ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಶ್ರೀಯುತ ಸು.ರಾಮಣ್ಣ ಅವರು ಕುಟುಂಬ ಪ್ರಭೋದನ್ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ನವದಂಪತಿ ಸಮಾವೇಶ’ದಲ್ಲಿ ಹೇಳಿದರು. ಆರಂಭದಲ್ಲಿ ನವದಂಪತಿಗಳು ಸರಸ್ವತಿ ದೇವಿಯ ಮುಂದೆ ಪರಸ್ಪರ ಹೂವಿನಹಾರಗಳನ್ನು ಬದಲಾಯಿಸಿಕೊಳ್ಳುತ್ತಾ, ಅಖಂಡ ಭಾರತಕ್ಕೆ ಹಣತೆಗಳನ್ನು ಬೆಳಗಿಸುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ದಂಪತಿಗಳಿಗೆ ಬಾಗಿನ ಸಮರ್ಪಿಸಲಾಯಿತು. ನವದಂಪತಿಗಳು ಗುಂಪುಶಃ ಬೈಠಕ್‍ನಲ್ಲಿ ಜೋಡಿಸಿಕೊಳ್ಳುತ್ತಾ ಪುರುಷರ ವಿಭಾಗದಲ್ಲಿ ಖ್ಯಾತ ಸಾಹಿತಿ, ಚಿಂತಕ, ಪ್ರಸ್ತುತ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾದ ಡಾ.ವರದರಾಜ್ ಚಂದ್ರಗಿರಿ ಹಾಗೂ ಮಹಿಳೆಯರ ವಿಭಾಗದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಸುಧಾ ಎಸ್ ರಾವ್ ಅವರು ಸೂಕ್ತವಾದ ಮಾರ್ಗದರ್ಶನವನ್ನು ನೀಡುತ್ತಾ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ದಂಪತಿಗಳಾಗಿ ಆಗಮಿಸಿದ ಶ್ರೀಮತಿ ಜಯಶ್ರೀ ಹಾಗೂ ರಾಜಗೋಪಾಲ್ ಭಟ್ ಅವರು, “ ಜೀವನದಲ್ಲಿ ದೈಹಿಕ, ಆರ್ಥಿಕ ಸಮಸ್ಯೆಗಳಂತಹ ಯಾವುದೇ ತೊಂದರೆಗಳು ಬಂದರೂ ಪರಸ್ಪರ ಹೊಂದಾಣಿಕೆ, ಸ್ನೇಹ, ಪ್ರೀತಿಗಳಿಂದ ಮನಸ್ಸನ್ನು ಅರಿತು ನಡೆದರೆ ಸಂಸಾರವು ಸುಖ ಸಮೃದ್ಧಿಗಳಿಂದ ಸಂತಸಮಯವಾಗಿರುತ್ತದೆ” ಎಂದು ನೂತನ ದಂಪತಿಗಳಿಗೆ ತಮ್ಮ ಜೀವನಾನುಭವಗಳ ಮೂಲಕ ಕಿವಿಮಾತು ಹೇಳಿದರು.ನವದಂಪತಿಗಳು ತಮ್ಮ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.

                                                                                                   

ಸಮಾಪನ ಮಾತುಗಳನ್ನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಸಹಸಂಯೋಜಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಯಾದ ಶ್ರೀ ಅಚ್ಯುತ ನಾಯಕ್ ಅವರು “ಮದುವೆ ಎಂಬುದು ಕೇವಲ ಇಬ್ಬರ ನಡಿವಿನ ಒಪ್ಪಂದವಾಗಿರದೆ ಗುರುಹಿರಿಯರ ಆಶೀರ್ವಾದ ಸಹಿತವಾಗಿ ಏರ್ಪಡುವ ಸಂಬಂಧ ಇದು ಎರಡು ಹೃದಯಗಳ, ಎರಡು ವ್ಯಕ್ತಿಗಳ ಜೊತೆಗೆ ಎರಡು ಕುಟುಂಬಗಳನ್ನು ಬೆಸೆಯುವ ನಂಟು. ಶ್ರೇಷ್ಠವಾದ ಗೃಹಸ್ಥಧರ್ಮವನ್ನು ಪಾಲಿಸುತ್ತಾ, ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವಲ್ಲಿಯೇ ವಿವಾಹ ವಿಧಿಯ ಸಾರ್ಥಕತೆ ಅಡಗಿದೆ” ಎಂದರು.

                                                                                     

ಶಾಲಾ ಭರತನಾಟ್ಯ ಗುರುಗಳು ಹಾಗೂ ಪೋಷಕರೂ ಆದಂತಹ ವಿದುಷಿ ಪ್ರೀತಿಕಲಾ ಇವರು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರ ಸ್ವಾಗತಿಸಿ, ಮುಖ್ಯಗುರು ಆಶಾ ಬೆಳ್ಳಾರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಸಂಚಾಲಕರಾದ ವಸಂತ ಸುವರ್ಣ ಧನ್ಯವಾದಗೈದ ಕಾರ್ಯಕ್ರಮವನ್ನು ಶಿಕ್ಷಕರಾದ ರಾಜೇಶ್ ಮತ್ತು ಸ್ವಾತಿ ನಿರೂಪಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ- ಶಿಕ್ಷಕೇತರ ವೃಂದ, ಅನ್ನಪೂರ್ಣ ಸಮಿತಿ, ಮಾತೃಭಾರತಿ, ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಹಾಗೂ ಶಾಲಾ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Highslide for Wordpress Plugin