ಅಧ್ಯಯನದ ವೈವಿಧ್ಯಮಯ ಸಾಧ್ಯತೆಗಳು ಅಧ್ಯಾಪನವನ್ನು ಪರಿಣಾಮಕಾರಿಯಾಗಿಸುತ್ತದೆ-
ಶ್ರೀ ವಸಂತ ಸುವರ್ಣ-ಶಾಲಾ ಸಂಚಾಲಕರು
ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಆರಂಭಿಕ ಕಾರ್ಯಕ್ರಮವಾಗಿ ಶಿಕ್ಷಕರಿಗೆ ‘ಸನ್ಮತಿ’ ಕಲಿಕಾ ಕಾರ್ಯಾಗಾರ ನೆರವೇರಿತು.ಮೂರು ದಿನಗಳ ಕಾರ್ಯಾಗಾರದಲ್ಲಿ ‘ಸಂವಿತ್’ಸಂಶೋಧನಾ ಕೇಂದ್ರ ಬೆಂಗಳೂರು ಇಲ್ಲಿನ ಯೋಗ ವಿಭಾಗದ ಮುಖ್ಯಸ್ಥರಾದ ಡಾ.ಸಿಂಧೂ ಇವರು “ಯೋಗ ಹಾಗೂ ಮೌಲ್ಯಶಿಕ್ಷಣವು ಪಠ್ಯ ವಿಷಯಗಳಲ್ಲಿ ಬೆಸೆದುಕೊಂಡಿದ್ದು ಇದನ್ನು ಗುರುತಿಸಿ ಮಕ್ಕಳಿಗೆ ಹೇಳಲು ಪ್ರತ್ಯೇಕ ಶಿಕ್ಷಕರ ಅಗತ್ಯವಿರುವುದಿಲ್ಲ. ಪ್ರತಿಯೊಬ್ಬ ಶಿಕ್ಷಕರು ಇದನ್ನು ಗುರುತಿಸಿ ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಜಿಲ್ಲಾ ಸಂಯೋಜಕರಾದ ಶ್ರೀ ಚಂದ್ರಶೇಖರ ಹಾಗೂ ಸಂಜಯ್ ಇವರು ಕಥಾ ಯೋಗ, ಗಾನ – ಯೋಗ , ನೃತ್ಯ-ಯೋಗ ಗಳಂತಹ ಸರಳ ಆಯಾಮ ಆಧಾರಿತ ವಿಷಯಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು.
ಎರಡನೇ ದಿನ ಶಾಲಾ ವಾರ್ಷಿಕ ಯೋಜನೆಗಳ ಮಹತ್ವ ಮತ್ತು ಪರಿಣಾಮಕಾರಿ ಯೋಜನೆಗಳ ತಯಾರಿ ಹಾಗೂ ಅನುಷ್ಠಾನ ಸಂಬಂಧಿ ಸಂವಾದ ನಡೆಯಿತು. ಪ್ರತಿಯೊಬ್ಬ ಶಿಕ್ಷಕರು ಪಠ್ಯ, ಪಠ್ಯ ಪೂರಕ ಹಾಗೂ ಸ್ವ – ಅವಲೋಕನ ಸಂಬಂಧಿ ವಾರ್ಷಿಕ ಯೋಜನೆಗಳನ್ನು ತಯಾರಿಸಬೇಕಾದ ಅಗತ್ಯತೆಗಳನ್ನು ಚರ್ಚಿಸಲಾಯಿತು.
ಮೂರನೇ ದಿನದಂದು ಬೆಂಗಳೂರು ಆಪ್ತ ಸಲಹಾ ಕೇಂದ್ರದ ಆಪ್ತ ಸಲಹೆಗಾರರಾದ ಶುಭಾ ದಯಾನಂದ್ ಮತ್ತು ಶುಭ ಭಟ್ ಇವರು ಆಪ್ತ ಸಲಹೆ ಯಾಕೆ? ಯಾರಿಗೆ? ಹೇಗೆ?ಎಂಬ ವಿಷಯದ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು. ಇವರು ಪ್ರತಿಯೊಬ್ಬ ಶಿಕ್ಷಕರೂ ಆಪ್ತ ಸಲಹೆಗಾರರಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಆಪ್ತ ಸಲಹೆಯ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು.
ಮಧ್ಯಾಹ್ನದ ಅವಧಿಯಲ್ಲಿ ಬಂಟ್ವಾಳದ ಮೂಡಂಬೈಲು ಶಾಲೆಯ ಮುಖ್ಯ ಗುರುಗಳಾದ ಶ್ರೀ ಅರವಿಂದ ಕುಡ್ಲ ಇವರು ;ಪಕ್ಷಿ ಪ್ರಪಂಚದ ಕೌತುಕ’ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಿ ಪ್ರಕೃತಿ ಸಂರಕ್ಷಣೆಯಲ್ಲಿ ಇಂಥಹ ಹಕ್ಕಿಗಳ ಮಹತ್ವ ಹಾಗೂ ನಮ್ಮ ಪಾತ್ರದ ಬಗ್ಗೆ ತಿಳಿಸಿದರು. ಅಳಿವಿನಂಚಿನಲ್ಲಿರುವ ಪಕ್ಷಿಗಳ ಪರಿಚಯ ಮಾಡಿಸುತ್ತಾ ವ್ಯಕ್ತಿ ಬದುಕು ಸರಳ ಮತ್ತು ಸಹಜವಾಗಿದ್ದಲ್ಲಿ ಪ್ರಕೃತಿ ಸಂರಕ್ಷಣೆಗೆ ಪ್ರತ್ಯೇಕ ತರಬೇತಿಗಳ ಅಗತ್ಯವಿಲ್ಲ ಎಂದು ತಿಳಿಸಿದರು.