‘ವಿದ್ಯಾರ್ಥಿ ದಿಶೆಯಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಅನಂತರವೂ ಅದನ್ನು ಮುಂದುವರಿಸಬೇಕು. ಶ್ರೀ ವಸಂತ ಕೋನಡ್ಕ- ವಕೀಲರು, ಬೆಂಗಳೂರು
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಹತ್ತನೇ ತರಗತಿ ಮಕ್ಕಳ ಉತ್ತಮ ಫಲಿತಾಂಶ[98%]ಕ್ಕಾಗಿ ಆಯೋಜಿಸಲಾದ ಸಾಧನಾಭಿನಂದನಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ ಶ್ರೀ ವಸಂತಕೋನಡ್ಕ ಅವರು ‘ನಮ್ಮಲ್ಲಿ ನಾವು ಪ್ರಮುಖವಾಗಿ ಐದು ಗುಣಗಳಾದ ಯೋಚನಾ ಸಾಮರ್ಥ್ಯ, ಯೋಜನಾ ಬದ್ಧತೆ, ಸಾಮಾನ್ಯಜ್ಞಾನ, ಸಮಯ ಪ್ರಜ್ಞೆ, ಸಮಾಜಮುಖಿ ಬದುಕು ಇವುಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕಾಗಿದೆ’ ಎಂದರು.
ಇನ್ನೋರ್ವ ಅಭ್ಯಾಗತರಾಗಿ ಆಗಮಿಸಿದ ಪಿ.ಎಸ್ ಪೆÇ್ರಜೆಕ್ಟ್ ಪುತ್ತೂರು ಇದರ ಮಾಲಕರಾದ ಶ್ರೀ ಪ್ರತಾಪಸಿಂಹ ವರ್ಮ ಇವರು ಪರೀಕ್ಷೆ ಬರೆದ ಎಲ್ಲಾ 94 ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂಧಿಸುವ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ನೀಡಿದ ಅಭಿನಂದನಾ ಪತ್ರ, ಸಸ್ಯದ ಕೊಡುಗೆ ಮಾಡಿದ ಹೋಮದ ಅಗ್ನಿಯ ಸಾಕ್ಷಿ ಈ ಎಲ್ಲವನ್ನೂ ಅರ್ಥೈಸಿಕೊಂಡಾಗ ಹೆಚ್ಚಿದ ಜವಾಬ್ದಾರಿಯ ಅರ್ಥವಾಗುತ್ತದೆ. ‘ಸತ್ಯಂ ವದ ಧರ್ಮಂ ಚರ’ ಎಂಬುದನ್ನು ನೆನಪಿಸುತ್ತದೆ. ‘ಐಕ್ಯೂ’ ಜೊತೆಗೆ ಇಕ್ಯೂ(ಭಾವನಾತ್ಮಕ ಕೋಶಂಟ್) ಕೂಡ ಅತಿ ಮುಖ್ಯ. ಮಕ್ಕಳ ದಾರಿತಪ್ಪಿಸುವ ವ್ಯಕ್ತಿಗಳ ಪರಿಸರಗಳ ಬಗ್ಗೆ ಮಕ್ಕಳನ್ನು ಎಚ್ಚರಿಸುವ ಕಾರ್ಯವನ್ನು ತಾಯಂದಿರು, ಹಿರಿಯರು ಮಾಡುತ್ತಾ ಅವರನ್ನು ದೇಶಾಭಿಮುಖಿ, ಸಮಾಜಾಭಿಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಭಾಧ್ಯಕ್ಷರಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ವಸಂತ ಮಾಧವ ಹೇಳಿದರು.
ಶಾಲಾ ಸಂಚಾಲಕರಾದ ಶ್ರೀ ವಸಂತ ಸುವರ್ಣರವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀಮತಿ ಶ್ವೇತಾ ಮಾತಾಜಿ ಪ್ರಾರ್ಥಿಸಿ, ಶ್ರೀಮತಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ಶ್ರೀ ಅಶೋಕ್ ಕುಂಬ್ಲೆ ಧನ್ಯವಾದ ಸಲ್ಲಿಸಿದರು.