ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹೊನಲು ಬೆಳಕಿನ ವಿವೇಕೋತ್ಸವ

ದೈಹಿಕ, ಮಾನಸಿಕ ಮಕ್ಕಳ ವೃದ್ಧಿಗಾಗಿ ಕ್ರೀಡೆ ಸಹಕಾರಿ-ಡಾ| ಹರೀಶ್ ಕುಮಾರ್

ಶಿಕ್ಷಣ ಕೇವಲ ಜ್ಞಾನವನ್ನು ಮಾತ್ರ ವೃದ್ಧಿಸುವುದಲ್ಲದೆ ನಮ್ಮಲ್ಲಿ ಜೀವನ ಕಲೆಯನ್ನು ಬೆಳೆಸುವಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಬದಲಾಗಿ ಕ್ರೀಡೋತ್ಸವ ಕಾರ್ಯಕ್ರಮ ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳಲ್ಲಿ ಜ್ಞಾನ ವೃದ್ದಿಯಾಗಲು ಸಹಕಾರಿಯಾಗುತ್ತದೆ. ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ| ಹರೀಶ್ ಕುಮಾರ್ ಹೇಳಿದರು. ಅವರು ಇಲ್ಲಿನ ತೆಂಕಿಲ ವಿವೇಕನಗರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಡಿಸೆಂಬರ್ ೯ ರಂದು ಸಂಜೆ ನಡೆದ ಹೊನಲು ಬೆಳಕಿನ ವಿವೇಕೋತ್ಸವ -೨೦೧೨ವನ್ನು ಕ್ರೀಡಾ ಧ್ವಜಾರೋಹಣಗೈದು ಉದ್ಫಾಟಿಸಿ ಮಾತನಾಡಿದರು. ಇಂದು ಉನ್ನತ ಹುದ್ದೆಗೆ ಹೋದಾಗ ಒತ್ತಡದ ಕೆಲಸ ಮಾಡುವ ಪರಿಸ್ಥಿತಿಯನ್ನು ಮಕ್ಕಳು ಅದನ್ನು ಎದುರಿಸುವ ಚೈತನ್ಯವನ್ನು ಮಕ್ಕಳು ಈಗಾಗಲೇ ಪಡೆಯಬೇಕಾಗಿದೆ. ಆದ್ದರಿಂದ ವಿದ್ಯಾಸಂಸ್ಥೆಗಳು ಒಳ್ಳೆಯ ವಿದ್ಯಾರ್ಥಿಯನ್ನು ಮಾತ್ರ ಬೆಳೆಸುವುದಲ್ಲ ಬದಲಾಗಿ ಅವನಲ್ಲಿ ಪ್ರಾಮಾಣಿಕತೆ, ಆದರ್ಶತೆ, ನೈತಿಕತೆ iತ್ತು ಪಾರದರ್ಶಕವಾಗಿ ಜೀವನ ಮಾಡಬೇಕೆನ್ನುವ ಒಂದು ಜೀವನ ಕಲೆಯ ಅಗತ್ಯತೆಯನ್ನು ಬೆಳೆಸಬೇಕು. ಈ ಕ್ರೀಡೋತ್ಸವದ ಮೂಲಕ ಅದು ಆರಂಭವಾಗಲಿ ಇದರಿಂದ ಪೋಷಕರು ಕೂಡ ನಮ್ಮ ಮಕ್ಕಳ ಪ್ರತಿಬೆಯನ್ನು ನಿರೀಕ್ಷೆಗೂ ಮೀರಿ ಚಿಂತಿಸುತ್ತಾರೆ ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಈ ವರ್ಷದಿಂದ ಇಲ್ಲಿ ಆರಂಭವಾದ ಈ ಕ್ರೀಡೋತ್ಸವ ಸಮಾಜ ಮತ್ತು ಜನರು ಏನು ಬಯಸುತ್ತಾರೆಯೇ ಅದು ಇಲ್ಲಿಂದ ಸಿಗಲಿ ಎಂದು ಹಾರೈಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶಕ ಉರಿಮಜಲು ರಾಮ ಭಟ್ಟರವರು ಧ್ವಜರೋಹಣ ಮಾಡಿ, ಬಳಿಕ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಫಾರ್ಚನೆಗೈದರು ಇದೇ ಸಂದರ್ಭದಲ್ಲಿ ವಿವೇಕೋತ್ಸವ ಸಂಚಿಕೆ ‘ಸಾಹಿತ್ಯಮಿತ್ರ’ ವನ್ನು ರಾಮಭಟ್ಟರವರು ಬಿಡುಗಡೆಗೊಳಿಸಿದರು ವಿವಿಧ ಶೈಕ್ಷಣಿಕ, ಕ್ರೀಡೆ ಮತ್ತಿತ್ತರ ಚಟುವಟಿಕೆಗಳಲ್ಲಿ ಜಿಲ್ಲಾ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗುರುತಿಸಲಾಯಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ರವೀಂದ್ರ.ಪಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಮಾತೃಭಾಷೆಯ ಶಿಕ್ಷಣ ಇವತ್ತು ಅತ್ಯಂತ ಪ್ರಸ್ತುತ ಎಂದು ಸಮಾಜ ಒಪ್ಪಿಕೊಳ್ಳಲು ಪ್ರಾರಂಭ ಮಾಡಿದೆ. ಈ ಕಾರಣದಿಂದ ನಮ್ಮ ಸಂಸ್ಥೆಯು ಕಳೆದ ೧೯ ವರ್ಷದಿಂದ ಮಾತೃ ಭಾಷೆಯ ಶಿಕ್ಷಣ ಕೊಡುವ ಪ್ರಯತ್ನ ಮಾಡುತ್ತಿದೆ. ಇಲ್ಲಿ ಕಲಿಯುತ್ತಿರುವ ಅದೇಷ್ಟೊ ಮಂದಿ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳಲ್ಲಿ ಇನ್ನೂ ಹೆಚ್ಚು ಚೈತನ್ಯ ತುಂಬಲು ಸ್ವಾಮೀ ವಿವೇಕಾನಂದ ಜನ್ಮದಿನಾಚರಣೆಯನ್ನು ನೆಪವಾಗಿರಿಸಿಕೊಂಡು ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸ್ವರೂಪವನ್ನು ಬದಲಾಯಿಸಿ ಹೊಸ ಸ್ವರೂಪವನ್ನು ಕೊಡಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಾ ಮಾಡಿಕೊಂಡು ವಿವೇಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಗೌರವ ಉಪಸ್ಥಿತರಿದ್ದ ಸುರತ್ಕಲ್‌ನ ದುರ್ಗಾಂಬಾ ಕನ್‌ಸ್ಟ್ರಕ್ಷ್‌ನ ಸಂತೋಷ್ ಕುಮಾರ್ ಶೆಟ್ಟಿ, ಸುರತ್ಕಲ್ ಶಿವಶಂಕರ ಫೈನಾನ್ಸ್ ಮತ್ತು ಸರ್ವೀಸಸ್‌ನ ಮಾಲಕ ಉದಯಶಂಕರ ನಾರಾಯಣ, ದುಬೈಯ ಉದ್ಯಮಿ ಸಂತೋಷ್ ರೈ ಕೈಕಾರ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಪ್ರಸಾದ್ ಮಡ್ತಿಲ, ನಿವೃತ್ತ ಇನ್‌ಕಂ ಟ್ಯಾಕ್ಸ್ ಕಮಿಷನರ್ ಬಿ.ರಾಮ್ ಕುಮಾರ್, ಮೈಸೂರಿನ ಇನ್‌ಫೋಸಿಸ್‌ನ ಸೀನಿಯರ್ ಡೆಲಿವರಿ ಮೇನೆಜರ್ ಜನಾರ್ದನ, ಆರ್.ಎಸ್.ಎಸ್. ನ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಬಲರಾಮ ಆಚಾರ್ಯ, ಗುಣಪಾಲ್ ಜೈನ್, ಎ.ವಿ.ನಾರಾಯಣ, ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಮಣ್ಣ ಗೌಡ, ಪ್ರೌಢಶಾಲಾ ವಿಭಾಗದ ಶಾಲಾ ನಾಯಕ ಉತ್ತಮ್.ಎನ್, ಪ್ರಾಥಮಿಕ ಶಾಲಾ ನಾಯಕಿ ಕು.ಅಂಕಿತಾ.ವಿ.ಕೆ, ಶಾಲಾ ಅಧ್ಯಕ್ಷ ಬಿ.ವಿಶ್ವೇಶ್ವರ ಭಟ್ ಬಂಗಾರಡ್ಕ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಮೊದಲಿಗೆ ವಿದ್ಯಾರ್ಥಿಗಳಿಂದ ಸಮೂಹಗಾನ ನಡೆಯಿತು. ಬಳಿಕ ದೀಪಪ್ರಜ್ವಲನೆಯ ಮೂಲಕ ಭಾರತ ಭೂಪಟವನ್ನು ತೋರಿಸಲಾಯಿತು. ಆ ಬಳಿಕ ಘೋಷ್, ನಾಡಗೀತೆ, ಸಮೂಹ ನೃತ್ಯ, ವೀರಗಾಸೆ, ಬೆಂಕಿ ಸಾಹಸ, ಯೋಗ ಪ್ರದರ್ಶನ, ಪೆನ್‌ಟಾರ್ಚ್, ನಿಯುದ್ಧ, ಸೈಕಲ್ ಬ್ಯಾಲೆನ್ಸ್, ಟ್ಯೂಬ್ ಲೈಟ್‌ನೊಂದಿಗೆ ಸಾಹಸ, ಶಿವತಾಂಡವ, ತಾಳನೃತ್ಯ, ಡೊಳ್ಳುಕುಣಿತ, ದಶವತಾರ, ಯಕ್ಷರೂಪಕ ನಡೆಯಿತು. ಚಂದ್ರಶೇಖರ್ ಮತ್ತು ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin