’ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ ಕಲಿಕೆ’ – ಸತ್ಯಮೂರ್ತಿ ಹೆಬ್ಬಾರ್

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತಕ್ಕೆ ಸಂಬಂಧಿಸಿದ ಚಟುವಟಿಕಾ ಕಾರ್ಯಗಾರದಲ್ಲಿ ವಿವಿಧ ಮಾದರಿಗಳನ್ನು ಪ್ರದರ್ಶಿಸುತ್ತಾ ಗಣಿತ ತರಗತಿಯು ಚಟುವಟಿಕೆಯುಕ್ತವಾಗಿ, ಇದ್ದಾಗ ಮಕ್ಕಳು ಕಲಿಕೆಯ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಸಣ್ಣ ಪರಿಕಲ್ಪನೆಯನ್ನು ವಿವಿಧ ಮಜಲುಗಳಲ್ಲಿ ಆಲೋಚಿಸಿ ಅಭ್ಯಾಸ ನಡೆಸಿದಾಗ ಗಣಿತವೆಂದರೆ ಕಠಿಣವಲ್ಲ. ಅದು ಸಂತಸದ ರಸದೂಟ ಎಂದೆನಿಸುತ್ತದೆಯೆಂದು ಸತ್ಯಮೂರ್ತಿ ಹೆಬ್ಬಾರ್ ನುಡಿದರು.

ಪಠ್ಯವಿಷಯಕ್ಕೆ ಸಂಬಂಧಿಸಿದಂತೆ ಪೈಥಾಗೊರಸ್ ಪ್ರಮೇಯಕ್ಕೆ ಸಂಬಂಧಿಸಿದ ಮಾದರಿ, ಥೇಲ್ಸ್ ಪ್ರಮೇಯ ಆಧಾರಿತ ಕಲಿಕಾ ಉಪಕರಣ, ಸ್ಪರ್ಶಕಗಳ ರಚನೆ, ತ್ರಿಕೋನಮಿತಿ ಅನುಪಾತಗಳು, ನಿರ್ದಿಷ್ಟ ಕೋನಗಳಿಗೆ ತ್ರಿಕೋನಮಿತಿ ಬೆಲೆ ಇತ್ಯಾದಿಗಳ ಮಾದರಿ ತೋರಿಸಿ ವಿವರಣೆ ನೀಡಲಾಯಿತು.

ಶಂಕು, ಸಿಲಿಂಡರ್, ಚೌಕಘನ, ಆಯತಘನ, ಶಂಕುವಿನ ಭಿನ್ನಕ, ಗೋಳ, ಅರ್ಧಗೋಳ ಇದರ ತೆರೆದ ಮಾದರಿಗಳನ್ನು ಪ್ರದರ್ಶಿಸಿ ಇದಕ್ಕೆ ಇರುವ ಬೇರೆ ಬೇರೆ ಸೂತ್ರಗಳು ಬಂದ ಬಗ್ಗೆ ತಿಳಿಸಲಾಯಿತು. ಹತ್ತನೇ ತರಗತಿಯ ಕಲಿಕಾಂಶಗಳ ಬಗ್ಗೆ ಚರ್ಚಿಸಲಾಯಿತು. ವಿದ್ಯಾರ್ಥಿಗಳು ಬೇರೆ ಬೇರೆ ಸಂದೇಹಗಳನ್ನು ಸಂಪನ್ಮೂಲ ವ್ಯಕ್ತಿಯಲ್ಲಿ ಕೇಳಿ ಪರಿಹಾರ ಪಡೆದುಕೊಂಡರು.

ಶಾಲಾ ’ಆವರ್ತ’ ಗಣಿತ ಸಂಘದ ವತಿಯಿಂದ ಆಯೋಜಿಸಲಾದ ಮೂರು ದಿನಗಳ ಕಾರ್ಯಗಾರವನ್ನು ಶಿಕ್ಷಕ ಸಂಯೋಜಕರಾದ ಪುಷ್ಪಾವತಿ, ಗಣೇಶ್, ರಾಜೇಶ್ ಕಾರ್ಯಾಗಾರವನ್ನು ಸಂಯೋಜಿಸಿದ್ದರು.

Highslide for Wordpress Plugin