ಗುರುಪೂರ್ಣಿಮೆಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಸಮನ್ವಯ-ಸಮಾಜ ವಿಜ್ಞಾನ ಸಂಘದಿಂದ ’ಗುರುವಂದನಾ’ ಕಾರ್ಯಕ್ರಮ ನೆರವೇರಿತು. ವಿವೇಕಾನಂದ ಪ್ರಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿಇಡಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮವನ್ನು ಶಾಲಾ 9 ನೇ ತರಗತಿಯ ವಿದ್ಯಾರ್ಥಿಗಳು ಆಯೋಜಿಸಿದ್ದರು. ಪ್ರಶಿಕ್ಷಣ ವಿದ್ಯಾರ್ಥಿಗಳು ಗುರುಪೂರ್ಣಿಮೆಯ ಬಗೆಗಿನ ಹಾಡು, ನೃತ್ಯ, ಭಾಷಣ, ನೃತ್ಯರೂಪಕಗಳನ್ನು ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.





ಅನಂತರ ಮಕ್ಕಳು ಹೂಗುಚ್ಚ ಹಾಗೂ ಅಭಿನಂದನಾ ಪತ್ರ ನೀಡಿ ಸಮೂಹ ಗೀತೆ ಹಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷರೂ ಪ್ರಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರೂ ಆದ ಶ್ರೀಯುತ ರಘುರಾಜ್ ಉಬರಡ್ಕ ಇವರು ಶಾಲೆಯಿಂದ ಹೊಸ ಬಗೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸಮಾಪನ ಮಾತುಗಳನ್ನಾಡಿದರು.
ಶಾಲಾ ಖಜಾಂಜಿಗಳಾದ ಶ್ರೀಯುತ ಅಶೋಕ ಕುಂಬ್ಳೆ, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಸಂಪನ್ನಗೊಂಡಿತು.