ಸಾಧನಾಭಿವಂದನಾ ಕಾರ್ಯಕ್ರಮ 

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿವಂದನಾ ಸಮಾರಂಭ ಸಾಧನಾಭಿವಂದನಾ ಜೂನ್ 11 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ, ಸ್ವಾಭಿಮಾನದಿಂದ ಕನ್ನಡವನ್ನು ಕಲಿತು ಉಳಿಸಬೇಕೆಂದರು. ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ಮಣಿಲ ಮಹಾದೇವ ಶಾಸ್ತ್ರೀ ಮಾತನಾಡಿ, ಬಡವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ ಮಾತನಾಡಿ ಶಿಕ್ಷಕರ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಇದಕ್ಕೆ ಪೋಷಕರ ಪ್ರೋತ್ಸಾಹವು ದೊರೆತಿದೆ. ಹೀಗೆ ನಿರಂತರವಾಗಿ ಸಾಧನ ಪಥ ಮಂದುವರಿಯಲಿ ಎಂದು ಹಾರೈಸಿದರು.

ಈ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಗರಿಷ್ಟ ಅಂಕ,ವಿಶಿಷ್ಟ ಶ್ರೇಣಿ ಹಾಗೂ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶಾಲಾ ನಿವೃತ್ತ ಮಾತಾಜಿ ದುರ್ಗಾದೇವಿ, ಶ್ರೀಮಾನ್ ವಿಶ್ವನಾಥ ಮುಡೂರು ಹಾಗೂ ಶಾಲಾ ವಾಹನ ಚಾಲಕ ಬೋಜಪ್ಪ ಗೌಡರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಹಾಗೂ ಸಂಚಾಲಕರಾದ ಶ್ರೀ ವಸಂತಸುವರ್ಣರವರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪ್ರೌಢಶಾಲಾ ಮುಖ್ಯ ಮಾತಾಜಿ ಆಶಾ ಬೆಳ್ಳಾರೆ ಸ್ವಾಗತಿಸಿದರು. ಶಾಲಾ ಸಂಚಾಲಕರಾದ ವಸಂತಸುವರ್ಣರು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಶಿಕ್ಷಕಿಯಾದ ಲೀಲಾವತಿ, ರೇವತಿ, ನಳಿನಿ ವಾಗ್ಲೆರವರು ಸನ್ಮಾನಿತರ ಪರಿಚಯ ಮಾಡಿದರು. ಧನ್ಯ ಮಾತಾಜಿ ಅಭಿನಂದಿತ ವಿದ್ಯಾರ್ಥಿಗಳ ಪಟ್ಟಿ ಓದಿದರು. ಸನ್ಮಾನ ಸ್ವೀಕರಿಸಿದ ವಿಶ್ವನಾಥ ಮುಡೂರು, ಅಭಿನಂದನೆ ಸ್ವೀಕರಿಸಿದ ವಿದ್ಯಾರ್ಥಿಗಳಾದ ಸಂಹಿತಾಶರ್ಮ, ಭೂಮಿಕಾ, ಪೋಷಕರಾದ ಮಾರ್ಕೋಪೋಲೋ ತೋಟಾರ, ಶ್ರೀಧರರವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಶಿಕ್ಷಕ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Highslide for Wordpress Plugin