ಶಾಲಾ ಕನ್ನಡ ಸಂಘ ‘ಮಹತಿ’ಯ ಆಶ್ರಯದಲ್ಲಿ ಕನ್ನಡಮನೆ-ಮಾತು-ಮಾಧ್ಯಮ ವಿಷಯಾಧಾರಿತ ಸಂವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ಪ್ರಸಕ್ತ ಶೈಕ್ಷಣಿಕ ಸಾಲಿನ 9 ಹಾಗೂ 10ನೇ ತರಗತಿ ಮಕ್ಕಳು ಹಾಗೂ ಅವರ ಪೋಷಕರು, ಮುಖ್ಯ ಅಭ್ಯಾಗತರಾಗಿ ಆಹ್ವಾನಿತರಾದ ಪದಶ್ರೀ ಪುರಸ್ಕೃತ, ಆಧುನಿಕ ಭಗೀರಥ ಎಂದೇ ಕರೆಯಲ್ಪಡುತ್ತಿರುವ ಕೃಷಿ ಕ್ಷೇತ್ರದ ಸರಳ ಸಜ್ಜನಿಕೆಯ ಸಾಧಕ ಶ್ರೀಯುತ ಮಹಾಲಿಂಗ ನಾಯ್ಕ ಅವರು ಗೌರವ ಸನ್ಮಾನ ಸ್ವೀಕರಿಸಿ “ನನಗೆ ವಿಧ್ಯಾಭ್ಯಾಸವಿಲ್ಲ. ನನ್ನ ಕೆಲಸವನ್ನು ಹಳ್ಳಿಯಿಂದ ದಿಲ್ಲಿಯವರೆಗಿನ ಜನರು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಇದು ನನಗೆ ದೊರೆತ ಪ್ರಶಸ್ತಿಯಲ್ಲಿ ಇಡೀ ಕರ್ನಾಟಕಕ್ಕೆ ದೊರೆತ ಪ್ರಶಸ್ತಿ, ಹಿರಿಯರ ಮೇಲಿನ ಗೌರವ ನಿರಂತರ ಶಮ ನಮ್ಮ ಏಳಿಗೆಗೆ ಸಹಕಾರಿ. ಈ ಭೂಮಿಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ, ಮುಂದೊಂದು ದಿನ ನೀರಿಲ್ಲದೆ ನಾವೆಲ್ಲಾ ಅತಂತ್ರರಾಗುವ ಪರಿಸ್ಥಿತಿ ಬರುತ್ತದೆ. ನಾವಿಂದೇ ಈ ಬಗ್ಗೆ ಎಚ್ಚರಗೊಳ್ಳಬೇಕು. ನೀರನ್ನು ಸಂಗ್ರಹಿಸುವ ಇಂಗಿಸುವ ಕೆಲಸವಾಗಬೇಕು. ಹಸಿವಾಗಿದೆ ಎಂದು ಇಲೆಕ್ಟ್ರಾನಿಕ್ ವಸ್ತುಗಳನ್ನು ತಿನ್ನಲು ಸಾಧ್ಯವಿಲ್ಲ. ಮೊಬೈಲ್ ನೋಡುತ್ತಾ ಸಮಯ ಕಳೆಯಬೇಡಿ. ಚೆನ್ನಾಗಿ ಕಲಿಯಿರಿ ನಿಮಗೆಲ್ಲಾ ಶುಭವಾಗಲಿ” ಎಂದು ಹಾರೈಸಿದರು.







ಕನ್ನಡ ಮಾಧ್ಯಮದಲ್ಲಿ ತಮ್ಮ ಪ್ರೌಢ ಶಾಲಾ ಶಿಕ್ಷಣ ಪೂರೈಸಿ ಇದೀಗ ತಮ್ಮ ವೃತ್ತಿ ಬದುಕನ್ನು ಆರಂಭಿಸಿರುವ ವೈದ್ಯರಾದ ಅಕ್ಷಯ ನಾರಾಯಣ, ಇಂಜಿನಿಯರ್ ವೃತ್ತಿಯಲ್ಲಿರುವ ವಿನೋದ್, ಆನೀಶ್, ಪದವಿ ವಿಭಾಗದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರಮೋದ್, ರಸಾಯನ ಶಾಸ್ತ್ರ ಪ್ರಾಧ್ಯಾಪಕರಾದ ರಚನಾ, ಸೌಂಡ್ ಇಂಜಿನಿಯರ್ ಆಗಿ ಸ್ವ-ಉದ್ಯೋಗದಲ್ಲಿರುವ ಉತ್ತಮ್, ಸಮೂಹ ಮಾಧ್ಯಮ ನಿರ್ವಾಹಕರಾದ ನಿಶಾಂತ್, ದೈಹಿಕ ಶಿಕ್ಷಣ ಪ್ರಾಧ್ಯಾಪಕಿಯಾದ ರಮ್ಯಾ, ವಾಸ್ತುಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದೇಶ ಶಾಸ್ತ್ರಿ, ಸ್ವ ಉದ್ಯಮಿಯಾಗಿರುವ ಜಯರಾಜ್ ಇವರು ತಮ್ಮ ಕಾಲೇಜು ಶಿಕ್ಷಣ ಹಾಗೂ ವೃತ್ತಿ ಬದುಕಿನ ಕ್ಷಮತೆಗೆ ಕನ್ನಡ ಮಾಧ್ಯಮದ ಕಲಿಕೆ ಸಹಕಾರಿಯಾದ ಬಗೆಯನ್ನು ತಿಳಿಸಿದರು. ಪ್ರಸಕ್ತ ಶೈಕ್ಷಣಿಕ ಸಾಲಿನ 10ನೇ ತರಗತಿಯ ಮಕ್ಕಳ ಪಶ್ನೆಗಳಿಗೆ ತಮ್ಮ ಸ್ವ-ಅನುಭವಗಳನ್ನೇ ಉತ್ತರವಾಗಿಸಿದ ಹಿರಿಯ ವಿದ್ಯಾರ್ಥಿಗಳು ಮಾಧ್ಯಮ ಯಾವತ್ತೂ ತೊಡಕಲ್ಲ. ನಮ್ಮಲ್ಲಿರಬೇಕಾದ ವಿಶ್ವಾಸ, ಧೈರ್ಯ, ನಿರಂತರ ಕಲಿಕೆ, ಸಮಯ ನಿರ್ವಹಣೆ ಹಾಗೂ ಸೂಕ್ತ ಮಾರ್ಗದರ್ಶನ ಗುರಿ ಸಾಧನೆಗೆ ಪ್ರೇರಣೆಯಾಗುತ್ತದೆ’ ಎಂದರು.
“ವಿದ್ಯಾರ್ಥಿ ದಿಶೆಯಿಂದಲೇ ಅನೇಕ ಭಾಷೆಗಳನ್ನು ಕಲಿಯುವ ಸಾಮರ್ಥ್ಯ ನಮ್ಮಲಿರುತ್ತದೆ. ನಮಗೆ ಇದರ ಅರಿವಿಲ್ಲದೆ ಇಂಗ್ಲೀಷ್ ಕಲಿಕೆ ಕಷ್ಟ ಎಂಬುದಾಗಿ ತೀರ್ಮಾನಿಸಿರುತ್ತೇವೆ. ಭಾಷಾ ಕಲಿಕೆಯ ಅಗತ್ಯತೆ ಮತ್ತು ಅನಿವಾರ್ಯತೆ ನಮ್ಮಲ್ಲಿ ಸೃಷ್ಟಿಸಿಕೊಂಡಾಗ ಖಂಡಿತವಾಗಿ ಇದು ಕಷ್ಟವಲ್ಲ” ಎಂದವರು ಆಂಗ್ಲಭಾಷಾ ಪ್ರಾಧ್ಯಾಪಕರೂ ಇದೀಗ ಪಿಎಚ್ಡಿ ಮಾಡುತ್ತಿರುವ ಹಿರಿಯ ವಿದ್ಯಾರ್ಥಿ ಪ್ರಮೋದ್ ಅವರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಮೇಶ್ಚಂದ್ರ, ಸಂಚಾಲಕರಾದ ವಸಂತ ಸುವರ್ಣ, ಖಜಾಂಜಿಯಾದ ಆಶೋಕ ಕುಂಬ್ಳೆ, ಸದಸ್ಯರಾದ ತಿರುಮಲೇಶ್ವರ ಭಟ್, ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿಗಳಾದ ದಾಮೋದರ ಪಾಟಾಳಿ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
10ನೇ ತರಗತಿಯ ಮಕ್ಕಳು 9ನೇ ತರಗತಿಯ ಮಕ್ಕಳಿಗೆ ದೀಪಪ್ರದಾನ ಮಾಡಿ, ಅಭಿನಂದನಾ ಪತ್ರ ಸ್ವೀಕರಿಸಿದರು. ಶಾಲಾ ಕೈ ತೋಟದಲ್ಲಿ ಕಸಿ ಮಾಡಲಾದ ಗಿಡಗಳನ್ನು ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡಲಾಯಿತು.
ಶಾಲಾ ಮುಖ್ಯಗುರುಗಳು ಪ್ರಾಸ್ತಾವಿಕ ಹಾಗೂ ಸ್ವಾಗತ ಮಾತುಗಳನ್ನಾಡಿದರು. ಸಹಶಿಕ್ಷಕಿ ಅನುಷಾರವರು ಕಾರ್ಯಕ್ರಮ ನಿರ್ವಹಿಸಿದರು. 9ನೇ ತರಗತಿಯ ಮಕ್ಕಳ ಪೋಷಕರು ಎಲ್ಲರಿಗೂ ಮನೆಯಡುಗೆಯನ್ನು ಬಡಿಸಿ ಸಂಭ್ರಮಿಸಿದ ಕಾರ್ಯಕ್ರಮ ಶಾಂತಿಮಂತದೊಂದಿಗೆ ಸಂಪನ್ನಗೊಂಡಿತು.