2020-21 ನೇ ಸಾಲಿನಲ್ಲಿ ಶಾಲೆ ’ವೃತಿಕಾ’ ಹಸಿರು ಯೋಜನೆ ಹಮ್ಮಿಕೊಂಡಿದ್ದು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿ- ಪೋಷಕರು ಈ ಯೋಜನೆಯಲ್ಲಿ ಕೈಜೋಡಿಸಿದ್ದಾರೆ. ಮಿತಿ ಮೀರುತ್ತಿರುವ ಭೂಮಿಯ ತಾಪಮಾನವನ್ನು ನಿಯಂತ್ರಣದಲ್ಲಿರುವ ಕ್ರಮಗಳಲ್ಲಿ ಪ್ರಮುಖವಾಗಿ ನೆಲ ಹಸಿರೀಕರಣಕ್ಕೆ ಆದ್ಯತೆ ನೀಡಬೇಕೆಂಬ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಅಪೇಕ್ಷೆಯಂತೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಎರಡು ವರ್ಷಗಳ ಹಿಂದಿನಿಂದ ಶಾಲಾ ಆವರಣದಲ್ಲಿ ಸುಮಾರು 15 ಬಗೆಯ ಬಾಳೆಗಿಡಗಳನ್ನು ನೆಟ್ಟು ಈ ಯೋಜನೆಗೆ ಚಾಲನೆ ನೀಡಲಾಗಿತ್ತು.





ಪ್ರಸಕ್ತ ವರ್ಷ ಇದನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಯಿಂದ ಅಡಿಕೆ, ತೆಂಗು, ಹಣ್ಣು, ತರಕಾರಿ, ಹೂವಿನ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕಲ್ಪಕ್ಕೆ ಮುಂದಾಗಿದೆ. ಪೋಷಕರು ಕೂಡ ಈ ಯೋಜನೆಗೆ ಸಹಯೋಗ ನೀಡಿದ್ದಾರೆ. ತಮ್ಮ ಮಗುವಿನ ಹುಟ್ಟುಹಬ್ಬದ ದಿನ ಒಂದು ಗಿಡ ನೀಡಿ ತಾವೂ ಭಾಗಿಗಳಾಗುವ ಇಂಗಿತ ವ್ಯಕ್ತಪಡಿಸಿದ ಪೋಷಕರು ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಶಾಲಾ ಕೈತೋಟಕ್ಕೆ ಅನೇಕ ಪೋಷಕರು ಗಿಡಗಳನ್ನು ನೀಡಿರುತ್ತಾರೆ.