ಪ್ರತಿಯೊಬ್ಬ ವಿದ್ಯಾರ್ಥಿ ತನ್ನಲ್ಲಿರುವ ಕ್ರೀಡಾಸ್ಫೂರ್ತಿಯ ಸದ್ಭಳಕೆ ಮಾಡಿಕೊಂಡು ಜೀವನದಲ್ಲಿ ಮುನ್ನಡೆಯುವ ಶಕ್ತಿ ಪಡೆದುಕೊಂಡರೆ ಕ್ರೀಡಾ ದಿನಚರಿಯು ಅರ್ಥಪೂರ್ಣವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಾರ್ಷಿಕ ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿದ ಪುತ್ತೂರಿನ ಉದ್ಯಮಿಗಳಾದ ಶ್ರೀ ಕೂಡ್ಗಿ ಶ್ರೀಕಾಂತ್ ಶೆಣೈಯವರು ಮಾತನಾಡಿದರು. ಪುತ್ತೂರು ಇನ್ನರ್ ವೀಲ್ ಕ್ಲಬ್‌ನ ಸಹಯೋಗದೊಂದಿಗೆ ನಡೆದ ಶಾಲಾ ಕ್ರೀಡಾಕೂಟದ ಧ್ವಜವಂದನೆ ಸ್ವೀಕಾರ ಮಾಡಿದ ಶ್ರೀಮತಿ ಸಹನಾ ಭವಿನ್ ಇವರು ಮಕ್ಕಳ ದಿನಾಚರಣೆಗೆ ಶುಭಕೋರುತ್ತಾ ಮಕ್ಕಳ ಕ್ರೀಡಾಸ್ಫೂರ್ತಿ ನಿತ್ಯ ನಿರ೦ತರವಾಗಲಿ ಎಂದು ಶುಭ ಹಾರೈಸಿದರು.




ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಎನ್.ಸಿ.ಸಿ ಆಫೀಸರ್ ಹಾಗೂ ಉಪನ್ಯಾಸಕರಾದ ಲೆಪ್ಟಿನೆಂಟ್ ಭಾಮಿ ಅತುಲ್ ಶೆಣೈ ಇವರು ದೇಶದ ರಕ್ಷಣೆಯಲ್ಲಿ ಎನ್.ಸಿ.ಸಿಯ ಕೊಡುಗೆಯನ್ನು ಸ್ಮರಿಸುತ್ತಾ ಮಕ್ಕಳು ಈ ಬಗ್ಗೆ ಒಲವು ತೋರಿಸುವಂತೆ ಪ್ರೋತ್ಸಾಹದ ಮಾತುಗಳನ್ನು ಆಡಿದರು. ವಿದ್ಯಾಭಾರತಿ ಕರ್ನಾಟಕ ಹಾಗೂ ಶಿಕ್ಷಣ ಇಲಾಖಾ ವತಿಯಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದ ಮತ್ತು ಭಾಗವಹಿಸಿದ ಮಕ್ಕಳ ಸಾಧನೆಯನ್ನು ಶ್ಲಾಘಿಸಲಾಯಿತು. ವೈವಿಧ್ಯಮಯ ಸಮವಸ್ತ್ರದೊಂದಿಗೆ ಪಥಸಂಚಲನ ನಡೆಸಿದ ಮಕ್ಕಳ ತಂಡದ ಶಿಸ್ತನ್ನು ಅಭ್ಯಾಗತರು ಅಭಿನಂದಿಸಿದರು.
ವೇದಿಕೆಯಲ್ಲಿ ಇನ್ನರ್ ವೀಲ್ ಸದಸ್ಯರಾದ ದಿವ್ಯಪ್ರಭಾ ಚಿಲ್ತಡ್ಕ, ವಿದ್ಯಾ ಆರ್ ಗೌರಿ, ಆಶಾ ನಾಯಕ್, ಆಡಳಿತ ಮಂಡಳಿ ಅಧ್ಯಕ್ಷರೂ, ಸಭಾಧ್ಯಕ್ಷರೂ ಆದ ಅಚ್ಯುತ ನಾಯಕ್, ಸಂಚಾಲಕರಾದ ರವಿನಾರಾಯಣ, ಸದಸ್ಯರಾದ ರಮೇಶ್ಚಂದ್ರ, ವಸಂತ ಸುವರ್ಣ, ಶೇಖರ ನಾರಾವಿ, ವೆಂಕಟರಮಣ ದೇರ್ಕಜೆ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ದಾಮೋದರ್ ಪಾಟಾಳಿ ಹಾಗೂ ಮುಖ್ಯಗುರುಗಳು ಉಪಸ್ಥಿತರಿದ್ದರು. ಯೋಗಿಕ್ ವ್ಯಾಯಾಮವು ಕ್ರೀಡಾಕೂಟದ ಆಕರ್ಷಣೆಯಾಗಿತ್ತು. ಸಹಶಿಕ್ಷಕರಾದ ಶ್ರೀಮತಿ ಅನುಷಾ ಮತ್ತು ಕು. ಧನ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.