ಮಾತೃಭಾಷೆಯನ್ನೇ ಸರಿಯಾಗಿ ಬಳಸಲು ಬಾರದ ನಾವು ಆಂಗ್ಲಭಾಷೆಗೆ ಜೋತು ಬೀಳುವುದೇಕೆ? ನಮ್ಮ ಮಾತೃಭಾಷೆ ಮಾತನಾಡುವ ಜೊತೆಗೆ ಹಿರಿಯರ ಬಗ್ಗೆ ಪ್ರೀತಿ, ಗೌರವ ಮೂಡುವಂತೆ ಮಕ್ಕಳನ್ನು ಬೆಳೆಸಿದಾಗ ವಯಸ್ಸಾದ ತಂದೆ-ತಾಯಿಯರು ’ವೃದ್ಧಾಶ್ರಮ’ ಸೇರುವುದನ್ನು ತಪ್ಪಿಸಬಹುದು. ಪ್ರರಿಶ್ರಮ, ಪ್ರಾಮಾಣಿಕತೆ, ಸಂಸ್ಕಾರಗಳಂತಹ ಸದ್ಗುಣಗಳು ಎಳೆಯ ಪ್ರಾಯದಲ್ಲೇ ದೊರೆತಾಗ ತಮ್ಮ ತಾಯ್ನಾಡಲ್ಲೇ ಬೇಕಾದ ಸಂಪತ್ತನ್ನು ಗಳಿಸಬಹುದು. ಮಕ್ಕಳ ಉತ್ತಮ ಕಾರ್ಯಗಳನ್ನು ಪ್ರಶಂಸಿಸಿ, ಹುರಿದುಂಬಿಸಿ, ಪ್ರೋತ್ಸಾಹಿಸಿ, ಮನೆಯಲ್ಲಿ ಕಲಿಕಾ ಪರಿಸರ ನಿರ್ಮಿಸಿ ಸಾಮರ್ಥ್ಯಕ್ಕೆ ತಕ್ಕ ಕನಸನ್ನು ಕಾಣಬೇಕು. ಕಷ್ಟ ಎದುರಿಸುವ ತರಬೇತಿ ನೀಡಬೇಕು. ಪೋಷಕರು ಶಿಕ್ಷಕರಾಗಬೇಕು, ಶಿಕ್ಷಕರೂ ಪೋಷಕರಾಗಬೇಕು. ಆಗ ಮಾತ್ರ ಮಗುವಿಗೆ ಪೂರಕ ವಾತಾವರಣ ನಿರ್ಮಾಣವಾಗಲು ಸಾಧ್ಯಎಂದು ಲೇಖಕರೂ, ನಿವೃತ್ತ ಅಧ್ಯಾಪಕರೂ ಆಗಿರುವ ಶ್ರೀಯುತ ನಾರಾಯಣ ಭಟ್ ರಾಮಕುಂಜ ಹೇಳಿದರು.



ಇವರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 6 ರಿಂದ 10ನೇ ತರಗತಿಯ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಚ್ಯುತ್ ನಾಯಕ್‌ರು ಉಪಸ್ಥಿತರಿದ್ದು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ, ಶ್ರೀಮತಿ ನಳಿನಿ ವಾಗ್ಲೆಯವರೂ ಉಪಸ್ಥಿತರಿದ್ದರು. ಶ್ರೀಮತಿ ಶ್ವೇತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಯೊಂದು ತರಗತಿವಾರು ವಿಭಾಗಗಳಲ್ಲಿ ಶಿಕ್ಷಕರ ಹಾಗೂ ಪೋಷಕರ ಸಂವಾದ ಕಾರ್ಯಕ್ರಮವಿತ್ತು. ಶಾಲಾ ವಾರ್ಷಿಕ ಶೈಕ್ಷಣಿಕ ಹಾಗೂ ಇತರ ಚಟುವಟಿಕೆಗಳನ್ನು ಪೋಷಕರಿಗೆ ತಿಳಿಸಲಾಯಿತು. ಪೋಷಕರಿಂದ ಅಭಿಪ್ರಾಯಗಳನ್ನು ಕೂಡಾ ತಿಳಿದುಕೊಳ್ಳಲಾಯಿತು. ನಂತರ ಶಿಕ್ಷಕ- ರಕ್ಷಕ ಸಂಘ ಹಾಗೂ ಮಾತೃಭಾರತಿ ಮಂಡಳಿಗೆ ಸದಸ್ಯರ ಆಯ್ಕೆ ನಡೆಯಿತು.