ಮಾತೃಭಾಷಾ ಪ್ರೇಮದೇಶವನ್ನು ಅಭಿವೃದ್ಧಿಗೊಳಿಸುತ್ತದೆ: ಅರ್ಜುನ್ರಾಮ್ ಮೇಘ್ವಾಲ್
ಪುತ್ತೂರು: ಹತ್ತೊಂಬತ್ತನೇ ಶತಮಾನಯುರೋಪ್ ಅದರಲ್ಲೂ ಇಂಗ್ಲೆಂಡಿನದಾಗಿತ್ತು. ಇಪ್ಪತ್ತನೆಯ ಶತಮಾನ ಉತ್ತರ ಅಮೇರಿಕಾದ ಪಾಲಾಯಿತು. ಇಪ್ಪತೊಂದನೆಯ ಶತಮಾನ ಯಾರದ್ದೆಂಬ ಚರ್ಚೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟು ಹಾಕಿದರು. ಅವರು ಈ ಶತಮಾನ ಏಷ್ಯಾಕ್ಕೆ ಸೇರಿದ್ದು ಎಂದರು. ಪರಿಣಾಮ ಬಹು ದೊಡ್ಡ ಚರ್ಚೆ ಆರಂಭವಾಯಿತು. ಯಾವ ದೇಶದಲ್ಲಿ ವಿವೇಕಾನಂದರ ಆದರ್ಶ ಹಾಗೂ ಮಾತೃ ಭಾಷಾ ಶಿಕ್ಷಣದ ಪ್ರೇಮ ಇದೆಯೋ ಅಂತಹ ಭಾರತವೇ ವಿಶ್ವಗುರು ಆಗಲು ಸಾಧ್ಯ ಎಂಬ ಸತ್ಯ ಈಗ ಗೋಚರವಾಗಲು ಆರಂಭವಾಗಿದೆ ಎಂದು ಭಾರತ ಸರ್ಕಾರದ ಹಣಕಾಸು ರಾಜ್ಯ ಸಚಿವ ಅರ್ಜುನ್ರಾಮ್ ಮೇಘ್ವಾಲ್ ಹೇಳಿದರು.
ಅವರು ಇಲ್ಲಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿಹಬ್ಬದ ಹಿನ್ನಲೆಯಲ್ಲಿ ರೂಪಿಸಿದ ನೂತನ ಶಾಲಾ ಕಟ್ಟಡ ಶೇಷಾದ್ರಿಯನ್ನು ಲೋಕಾರ್ಪಣೆಗೊಳಿಸಿ, ಶಾಲೆಯ ಬೆಳ್ಳಿಹಬ್ಬಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ದಿ ಗಾರ್ಡಿಯನ್ ಅನ್ನುವ ಯುರೋಪ್ ಪತ್ರಿಕೆ 2014 ರಲ್ಲಿ ಎನ್.ಡಿ.ಎ ಸರ್ಕಾರ ಆಡಳಿತಕ್ಕೆ ಬಂದಾಗ ಒಂದು ಲೇಖನ ಬರೆದಿತ್ತು. ಅದರಲ್ಲಿ 1947 ರಂದು ಬ್ರಿಟಿಷ್ ಆಡಳಿತ ಭಾರತವನ್ನು ಬಿಟ್ಟು ಬಂದಿದ್ದರೂ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಈಗ ದೊರಕಿದೆ. ಪ್ರಸ್ತುತ ದೇಶವನ್ನು ಮುನ್ನಡೆಸುತ್ತಿರುವ ವ್ಯಕ್ತಿ ಸಮಾಜದಿಂದ ಬಂದವರೇ ಹೊರತು ಅವರ ಕುಟುಂಬದವರು ಯಾರೂ ರಾಜಕೀಯದಲ್ಲಿಲ್ಲ. ಸಮಾಜದ ಕಷ್ಟ ಸುಖಗಳನ್ನು ಉಂಡು ಬೆಳೆದ ವ್ಯಕ್ತಿ ಇಂದು ಭಾರತದ ನೇತಾರರಾಗಿದ್ದಾರೆ ಕೊನೆಗೂ ನಾವು ಭಾರತವನ್ನು ಬಿಟ್ಟು ಬಂದಿದ್ದೇವೆ ಎಂದು ಬರೆದಿತ್ತು. ಈ ಬಗೆಗೆ ಭಾರತದಲ್ಲಿ ವ್ಯಾಪಕ ಚರ್ಚೆಯೂ ನಡೆಯಿತು ಎಂದರು.
ಸ್ವಾಮಿ ವಿವೇಕಾನಂದರು ಈ ದೇಶದ ಶಕ್ತಿ. ಪಾಶ್ಚಿಮಾತ್ಯರಲ್ಲಿ ದರ್ಜಿ ಒಬ್ಬನು ವ್ಯಕ್ತಿತ್ವ ರೂಪಿಸಿದರೆ ಭಾರತದಲ್ಲಿ ಚಾರಿತ್ರ್ಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಘಂಟಾಘೋಷವಾಗಿ ಹೇಳಿದವರು. ಸ್ವಾತಂತ್ರ ಪೂರ್ವದಲ್ಲೇ ಭಾರತದ ಭವಿಷ್ಯವನ್ನು ಕಂಡವರು. ನಮ್ಮಕಾಲದಲ್ಲಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ 2020 ರ ಕನಸನ್ನು ಹರಿಯಬಿಟ್ಟವರು. ಅವರೆಲ್ಲರ ಕನಸು ನನಸಾಗುವ ದಿನಗಳು ಹತ್ತಿರದಲ್ಲಿವೆ. ಮಾತೃ ಭಾಷಾ ಶಿಕ್ಷಣದ ವೈಭವ ಇರುವಲ್ಲಿ ದೇಶ ಮುನ್ನಡೆಯುವುದರಲ್ಲಿ ಅನುಮಾನವಿಲ್ಲ ಎಂದರು.
ಯೋಗದ ಬಗೆಗೆ ಈ ಹಿಂದಿನಿಂದಲೂ ಚರ್ಚೆಗಳಿತ್ತಾದರೂ ಒಂದು ದೇಶದ ಪ್ರಧಾನಿ ಆಸಕ್ತಿ ವಹಿಸಿ ಅದನ್ನು ವಿಶ್ವದಾದ್ಯಂತ ಅದನ್ನು ಪ್ರಚುರ ಪಡಿಸಿ ತನ್ನದೇಶ ಮಾರ್ಗದರ್ಶಕ ಆಗುವಂತೆ ಮಾಡಿದ್ದು ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅನ್ನುವುದನ್ನು ಗಮನಿಸಬೇಕು. ಮೋದಿಯವರು ಭಾರತ ವಿಶ್ವಗುರು ಎನ್ನುವುದನ್ನು ತನ್ನ ಕಾರ್ಯದಿಂದ ತೋರಿಸಿಕೊಡುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನಾ ವಿಭಾಗದ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಯಾವುದೇ ದೇಶ ಅಭ್ಯುದಯ ಆಗಬೇಕಾದರೆ ಹಿಂದೆ ಆ ದೇಶ ಹೇಗಿತ್ತು? ಈಗಿನ ಸವಾಲುಗಳೇನು ಮುಂದಿನ ಕನಸೇನು ಎನ್ನುವುದನ್ನು ಗಮನಿಸಬೇಕು. ಭಾರತದಲ್ಲಿ ಹಿಂದೆ ಭಾರತೀಯ ಮಾನಸಿಕತೆ ಇತ್ತು. ಆದರೆ ಈಗ ಇಂಗ್ಲಿಷ್ ಬಗೆಗೆ ಆಸಕ್ತಿ ಹೆಚ್ಚಾಗುತ್ತಿದೆ. ಹಾಗೆಂದು ಆಂಗ್ಲ ಮಾಧ್ಯಮ ಕೆಟ್ಟದ್ದಲ್ಲ, ಆದರೆ ಇಂಗ್ಲಿಷ್ ಮಾನಸಿಕತೆ ಆತಂಕಕಾರಿ. ಇಲ್ಲಿಯ ಸಂಸ್ಕೃತಿ, ಸಂಸ್ಕಾರ ಕೇವಲ ಇಲ್ಲಿನ ಭಾಷೆಯಿಂದ ಮಾತ್ರ ಸಾಧ್ಯ. ಭಾರತೀಯ ಭಾಷೆಗಳ ಸಮಾಧಿಯಲ್ಲಿ ಇಂಗ್ಲಿಷ್ ಕಟ್ಟುವುದು ಒಪ್ಪತಕ್ಕ ವಿಚಾರ ಅಲ್ಲ ಎಂದರು.
ಮತ್ತೋರ್ವ ಅತಿಥಿ ಪುತ್ತೂರಿನ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್, ಶಾಲೆಯ ನೂತನ ಗಣಕಯಂತ್ರ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಮಾಧ್ಯಮದ ಶಾಲೆಯ ಬಗೆಗೆ ಮಾತನಾಡುವುದೆಂದರೆ ಅದೊಂದು ಭಾವನಾತ್ಮಕ ವಿಚಾರ. ಕನ್ನಡ ಶಾಲೆಗಳ ಬೆಳವಣಿಗೆ ಸಂತಸ ತರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಪ್ರಸ್ತುತ ನಮ್ಮ ಸಮಾಜ ಕನ್ನಡ ಮಾಧ್ಯಮ ಶಾಲೆಯಿಂದ ದೂರ ಸರಿಯುತ್ತಿದೆ. ಆದರೆ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಟ್ಟಾಗ ಮಾತ್ರ ಮಗುವಿಗೆ ಉಪಯೋಗ, ಸಹಾಯ ಆಗಲು ಸಾಧ್ಯ ಎಂಬುದು ವಿಜ್ಞಾನಿಗಳು, ಶಿಕ್ಷಣವೇತ್ತರು ಒಪ್ಪಿಕೊಂಡಿರುವ ಸತ್ಯ. ಈ ಹಿನ್ನಲೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಕಳೆದ ಇಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಅನೇಕ ಹೆತ್ತವರು, ಊರವರು ಈ ಶಾಲೆಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ನುಡಿದರು.
ದೇಶದ ಭವಿಷ್ಯ ನಿರ್ಮಾಣ ಆಗುವುದು ನಾಲ್ಕು ಗೋಡೆಯ ಮಧ್ಯದಲ್ಲಿ ಎಂಬ ನಂಬಿಕೆ ಇದೆ. ಮನೆಯಲ್ಲೇ ವ್ಯಕ್ತಿತ್ವ ನಿರ್ಮಾಣ ಆಗುವ ಕಾರ್ಯಆಗಬೇಕಿತ್ತು. ಆದರೆ ಅದಾಗುತ್ತಿಲ್ಲ. ಶಾಲೆಯಲ್ಲೂ ಈ ಕಾರ್ಯ ಆಗುತ್ತಿಲ್ಲ. ಆದ್ದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹೊಸ ಶಕೆಯನ್ನು ಆರಂಭಿಸಿದೆ. ಮಾತೃ ಭಾಷಾ ಶಿಕ್ಷಣದಲ್ಲಿ ಒಂದನೆಯಿಂದ ಹತ್ತನೆಯ ವರೆಗೆ ಕಲಿತ ಹುಡುಗನೊಬ್ಬ ಈ ಬಾರಿ ಹತ್ತನೆಯಲ್ಲಿ ರಾಜ್ಯಕ್ಕೇ ಮೊದಲಿಗನಾಗಿದ್ದಾನೆ ಎಂದರೆ ಮಾತೃ ಭಾಷಾ ಶಿಕ್ಷಣದ ಸಾಮರ್ಥ್ಯ ಏನು ಎಂಬುದು ಅರ್ಥ ಆಗುತ್ತದೆ ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ಹರಿಣಿ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು. ಈ ಭಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಆರು ನೂರಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಚಿವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಗುರುವಾರ ಬೆಳಗ್ಗೆ ನಿಧನರಾದ ಕೇಂದ್ರ ಪರಿಸರ ಖಾತೆ ಸಚಿವ ಅನಿಲ್ ಮಾಧವ ದವೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಅರ್ಪಿತ ವೈಯಕ್ತಿಕ ಗೀತೆ ಹಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ ನಾಯಕ್ ಪ್ರಸ್ಥಾವನೆಗೈದು ಸ್ವಾಗತಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಧ್ಯಾಪಕಿಯರಾದ ಉಮಾ ಮೋಹನ್ ಹಾಗೂ ವಿದ್ಯಾ ಅನಿಲ್ ಕಾರ್ಯಕ್ರಮ ನಿರ್ವಹಿಸಿದರು.