ಮೇ 18 ರಂದು ಬೆಳ್ಳಿಹಬ್ಬ, ನೂತನಕಟ್ಟಡ ಲೋಕಾರ್ಪಣೆ | ಏ 30 ರೊಳಗೆ ಗ್ರಾಮ ಮಟ್ಟದ ಸಭೆ
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾಗಿ ತೆಂಕಿಲದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಮತ್ತು ನೂತನ ಶಾಲಾ ಕಟ್ಟಡದ ಲೋಕಾರ್ಪಣಾ ಸಮಾರಂಭ ಮೇ 18 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಗ್ರಾಮ ಸಮಿತಿ ಪ್ರಮುಖರ ಸಭೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಏ 20 ರಂದು ಅಪರಾಹ್ನ ಶಾಲೆಯಲ್ಲಿ ನಡೆಯಿತು.


ವಿವೇಕಾನಂದ ಬಿ.ಎಡ್. ಕಾಲೇಜಿನ ಅಧ್ಯಕ್ಷರಾದ ಪ್ರೊ. ಎ.ವಿ.ನಾರಾಯಣ ಇವರು ದೀಪ ಬೆಳಗಿಸಿ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಇಂಗ್ಲಿಷ್ ಭಾಷೆಯ ವ್ಯಾವೋಹ ನಮ್ಮಲ್ಲಿ ಭಾವನೆಗಳನ್ನು, ಸಂಬಂಧಗಳನ್ನು ಬಿಟ್ಟುಹಾಕಿವೆ. ಸಮಾಜ, ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸುವ ಸಾಧನ ನಮ್ಮ ಮಾತೃಭಾಷೆಯಾಗಿದೆ. ಅದನ್ನು ಬೆಳೆಸುವ ಕಾರ್ಯ ನಮ್ಮಿಂದಾಗಬೇಕಾಗಿದೆ. ಕೇವಲ ಮಾತೃಭಾಷೆಯಿಂದ ಮಾತ್ರ ಪುರುಷಸಿಂಹಗಳನ್ನು ತಯಾರಿಸಲು ಸಾಧ್ಯವಿದೆ. ಧರ್ಮ, ಸಂಸ್ಕೃತಿ ಮಾತೃ ಭಾಷೆಯಿಂದ ಉಳಿಯುತ್ತದೆ, ಮಾತೃಭಾಷೆಯನ್ನು ಬೆಳೆಸಿ ಪೋಷಿಸುವ ನಿಟ್ಟಿನಲ್ಲಿ ನಮ್ಮದು ಒಂದು ರೀತಿಯ ಸ್ವಾತಂತ್ರ್ಯ ಹೋರಾಟವಾಗಿದ್ದು ಈ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಏ 30 ರ ಒಳಗೆ ಗ್ರಾಮ ಮಟ್ಟದಲ್ಲಿ ನಡೆಯುವ ಸಭೆಗೆ ಪ್ರತಿ ಊರಿನಿಂದ ಜನರನ್ನು ಸೇರಿಸಿ ಮೇ 18 ರ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಇಂದಿನಿಂದಲೇ ಕಾರ್ಯತತ್ಪರಗಾರಬೇಕೆಂದು ಸಭೆಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ಳಿಹಬ್ಬ ಹಾಗೂ ನೂತನಕಟ್ಟಡದ ಲೋಕಾರ್ಪಣಾ ಸಮಾರಂಭದ ಆಮಂತ್ರಣ ಪತ್ರವನ್ನು ಉಪಸ್ಥಿತರಿದ್ದ ಗ್ರಾಮದ ಪ್ರಮುಖರಿಗೆ ವಿತರಿಸಲಾಯಿತು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶಿವಪ್ರಸಾದ್ ಇ, ಜಯಂತಿ ನಾಯಕ್, ಕನ್ನಡ ಮಾಧ್ಯಮ ಶಾಲೆಯ ಅಚ್ಯುತ ನಾಯಕ್, ಸಂಚಾಲಕ ವಿನೋದ್ಕುಮಾರ್ ರೈ ಉಪಸ್ಥಿತರಿದ್ದರು. ಬೆಳ್ಳಿಹಬ್ಬ ಸಮಿತಿಯ ಕಾರ್ಯದರ್ಶಿ ಹರಿಣಿ ಪುತ್ತೂರಾಯ ಸ್ವಾಗತಿಸಿ, ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ವಂದಿಸಿದರು.ಶಾಲಾ ಮುಖ್ಯಗುರು ಆಶಾಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
