ಶಿಕ್ಷಕರನ್ನು ಸಕ್ರಿಯರನ್ನಾಗಿಸಲು ಮಕ್ಕಳು ಪ್ರಶ್ನೆ ಕೇಳಬೇಕು. ಸಹಜತೆ ಮತ್ತು ಕುತೂಹಲದ ಪ್ರಶ್ನೆಗಳು ನಮ್ಮಲ್ಲಿ ವಿಷಯ ಜ್ಞಾನದ ಆಳ ಹೆಚ್ಚಿಸುವಲ್ಲಿ ಸಹಕಾರಿ. ಶಿಕ್ಷಕರು ನಮಗೆ ಮಾರ್ಗದರ್ಶಕರು. ನಿಜವಾದ ಕಲಿಕಾ ಆಸಕ್ತಿ ಹಾಗೂ ಕಾರ್ಯಪ್ರವೃತ್ತಿ ಮಕ್ಕಳಲ್ಲಿ ಬೆಳೆಯಬೇಕಾಗಿದೆ. ಕಲಿಸುತ ಕಲಿಯುವ, ಕಲಿಯುತ ಕಲಿಸುವ ಪರಮ ಧರ್ಮವು ಶಿಕ್ಷಕನದಾಗಿದ್ದು ಆತ ನಿರಂತರ ಅಧ್ಯಯಶೀಲತೆ ಹೊಂದಿರಬೇಕು. ಸಮಾಜದಲ್ಲಿ ಸನ್ಮಾರ್ಗ ತೋರುವ ಎಲ್ಲರೂ ಗುರುಗಳಾಗಿರುತ್ತಾರೆ ಎಂದು ಡಾ. ಎನ್. ಸುಕುಮಾರ್ ಗೌಡ ಮಕ್ಕಳೊಂದಿಗೆ ಸಂವಾದ ನಡೆಸುತ್ತ ನುಡಿದರು.


ವಿವೇಕಾನಂದ ಕನ್ನಡ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಇವರ ಅಧ್ಯಯನ ಕೇಂದ್ರ ಹಾಗೂ ಶಿಶು ಶಿಕ್ಷಣ ಕೇಂದ್ರವಾದ ಮಕ್ಕಳ ಮಂಟಪಕ್ಕೆ ತೆರಳಿ ಕುತೂಹಲದ ಪ್ರಶ್ನೆಗಳನ್ನು ಕೇಳುತ್ತಾ ಸಂವಾದ ನಡೆಸಿದರು. ನಾನು ಮಕ್ಕಳಿಗೆ ಭಾಷಣ ಮಾಡಲಾರೆ ಆದರೆ ಸಂವಾದ ನಡೆಸಲು ಇಚ್ಛಿಸುತ್ತೇನೆ ನಿಮ್ಮ ಪ್ರಶ್ನೆಗಳೇ ಇಂದಿನ ಕಾರ್ಯಕ್ರಮದ ಮೂಲ ಜೀವ ದ್ರವ್ಯ ಎಂದು ನುಡಿದ ಇವರು ಹೀಗೊಂದು ಯೋಚನೆಯು ಆಚರಣೆಯ ನಿಜವಾದ ತಾತ್ಪರ್ಯವನ್ನು ತೋರಿಸುತ್ತದೆ ಎಂದರು.
ಅನಂತರ ಶಾಲಾ ವತಿಯಿಂದ ಕೇಂದ್ರದ ಪುಸ್ತಕ ಭಂಡಾರಕ್ಕೆ ಪುಸ್ತಕಗಳನ್ನು ಅಲ್ಲಿಯ ಮಕ್ಕಳಿಗೆ ಹಣ್ಣು ಹಾಗೂ ಸಿಹಿ ತಿಂಡಿಗಳನ್ನು ನೀಡಲಾಯಿತು. ಮಕ್ಕಳೊಂದಿಗೆ ಕಳೆದ ಈ ಹೊತ್ತು ನನಗೆ ಖುಷಿ ನೀಡಿದೆ ಎಂದ ಡಾ. ಎನ್ ಸುಕುಮಾರ ಗೌಡರಲ್ಲಿ ಎಲ್ಲಾ ಮಕ್ಕಳು ಶಿಕ್ಷಕರು ವಿದಾಯ ಹೇಳುತ್ತಾ ತೆರಳಿದರು.