ವಿದ್ಯಾರ್ಥಿಗಳು ಉರಿಯುವ ಜ್ವಾಲೆಗಳಾಗಬೇಕು – ಸತೀಶ್‌ಕುಮಾರ್
ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಹೊಳೆಯುವ ಚುಕ್ಕೆಗಳಾಗಬಾರದು. ಹೊಳೆಯಲು ಬೇಕಾದ ಜ್ವಾಲೆಯಾಗಿ ಉರಿಯುವ ಬೆಂಕಿಯಾಗಬೇಕು. ಬಳಿಕ ಅದು ಶುಭ್ರವಾಗಿ ಹೊಳೆಯಬೇಕು ಎಂದು ಸಹಾಯಕ ಕಮಿಷನರ್ ಸತೀಶ್‌ಕುಮಾರ್ ಡಿ. ಎಮ್. ಹೇಳಿದರು.






ತೆಂಕಿಲ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಲ್ಲಿ ಡಿ. 10 ರಂದು ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಹಬ್ಬ’ವಿವೇಕೋತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧೆ ಸಾಮಾನ್ಯ. ಪೋಷಕರು ಇದಕ್ಕೆ ಮಾರು ಹೋಗಬಾರದು. ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಮಾತ್ರವೇ ಸೀಮಿತವಾಗಿಡಬೇಡಿ. ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗುವ ಕನಸು ಹೊತ್ತುಕೊಳ್ಳುವುದು ಸರಿಯಲ್ಲ. ಪಠ್ಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಮೌಲ್ಯಯುತವಾದ ಶಿಕ್ಷಣ ನೀಡಬೇಕು ಎಂದ ಅವರು ಕೇವಲ ಶಾಲಾ ಶಿಕ್ಷಣದಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ. ಪಠ್ಯ ಶಿಕ್ಷಣದ ಜೊತೆಗೆ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀಡಬೇಕು. ಇಂತಹ ಶಿಕ್ಷಣ ಶಾಲೆಯಲ್ಲಿ ಶಿಕ್ಷಕರಿಂದ ಮಾತ್ರ ದೊರೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯಜೀವನ್‌ರಾಂ ಮಾತನಾಡಿ, ಕನ್ನಡ ಮಾಧ್ಯಮ ಮತ್ತು ಸರಕಾರಿ ಶಾಲೆಗಳಲ್ಲಿ ಉತ್ತಮ ಅನಿಭವೀ ಶಿಕ್ಷಕರಿದ್ದಾರೆ. ಅವರಿಂದ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕೀಳರಿಮೆ ಪಡುವ ಅಗತ್ಯವಿಲ್ಲ. ಅವರಲ್ಲಿರುವಷ್ಟು ಜ್ಞಾನ ಭಂಡಾರ ಬೇರಾವ ವಿದ್ಯಾರ್ಥಿಗಳಲ್ಲಿ ಇರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ವಿಶ್ವಾಸತುಂಬುವ ಕೆಲಸ ಶಿಕ್ಷಕರು ಹಾಗೂ ಪೋಷಕರು ಮಾಡಬೇಕು ಎಂದು ಹೇಳಿದರು. ರಾಜಿ ಬಲರಾಮ ಆಚಾರ್ಯ ಮಾತನಾಡಿ , ಶಿಕ್ಷಣವು ಮಕ್ಕಳ ಅಭಿವ್ಯಕ್ತಿಗೆ ಪೂರಕವಾಗಿರಬೇಕು. ಅದು ಅವರ ಜೀವನ ರೂಪಿಸಲು ಪೂರಕವಾಗಿರಬೇಕುಎಂದು ಹೇಳಿದರು.
ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ವಿನೋದ್‌ಕುಮಾರ್‌ರೈ ಗುತ್ತು, ಶಾಲಾ ಸಂಚಾಲಕ ರವೀಂದ್ರ. ಪಿ, ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷಅನೀಶ್, ಪ್ರೌಢಶಾಲಾ ನಾಯಕಿ ಅಂಕಿತಾ.ವಿ.ಕೆ, ಪ್ರಾಥಮಿಕ ಶಾಲಾ ನಾಯಕ ಚೇತಕ್‌ಟಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ : 2015-16 ನೇ ಸಾಲಿನ ಹತ್ತನೇ ತರಗತಿಯ ಸಾಂಸ್ಕೃತಿಕ, ವಿಜ್ಞಾನ ಹಾಗೂ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಈ ಸಾಲಿನ ಹತ್ತನೇ ತರಗತಿಯ 27 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷಡಾ| ಕೃಷ್ಣ ಭಟ್‌ಕೊಂಕೋಡಿ ಸ್ವಾಗತಿಸಿದರು.ಮುಖ್ಯಗುರು ಆಶಾಬೆಳ್ಳಾರೆ ವರದಿ ವಾಚಿಸಿದರು. ಶಿಕ್ಷಕಿ ಭವ್ಯಾ ಕಾರ್ಯಕ್ರಮ ನಿರೂಪಿಸಿ, ಆಡಳಿತ ಮಂಡಳಿಯ ಸದಸ್ಯೆ ಶೋಭಾ ಕೊಳತ್ತಾಯ ವಂದಿಸಿದರು. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.