ಬದುಕಿನ ಪ್ರತಿ ಅನುಭವವೂ ಯಾವುದೇ ಪದವಿಗೂ ಕಡಿಮೆಯಿಲ್ಲ. ಇದು ಶಿಕ್ಷಣ ಪ್ರಕ್ರಿಯೆಯ ಒಂದು ಭಾಗ. ನಿರಂತರ ಅಧ್ಯಯನ ಶೀಲತೆ ಶಿಕ್ಷಕರಿಗೆ ಅತಿ ಅಗತ್ಯ ಎಂದು ಪತ್ರಕರ್ತ ಹಾಗೂ ಲೇಖಕ ಗೋಪಾಲಕೃಷ್ಣ ಕುಂಟಿನಿ ನುಡಿದರು. ಇವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ’ದ ಉದ್ಫಾಟನೆಯನ್ನು ನೇರವೇರಿಸಿ ಕಾರ್ಯಾಗಾರದ ಪ್ರಸ್ತುತತೆಯನ್ನು ಮೆಚ್ಚಿಕೊಂಡರು. ಸಭಾಧ್ಯಕ್ಷತೆ ವಹಿಸಿದ ಶಾಲಾಧ್ಯಕ್ಷರಾದ ಡಾ.ಕೃಷ್ಣ ಭಟ್ ಕೊಂಕೋಡಿ ಇವರು ಮಕ್ಕಳು ಭತ್ತ ತುಂಬಿಸುವ ಚೀಲಗಳಾಗದೆ ಭತ್ತ ಬೆಳೆಯುವ ಹೊಲಗಳಾಗಿ ರೂಪುಗೊಳ್ಳಬೇಕೆಂಬ ಹಿರಿಯರ ನುಡಿಯನ್ನು ಸ್ಮರಿಸಿಕೊಂಡರು.


ಡಾ. ನರೇಂದ್ರ ರೈ ದೇರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಥಮ ಅವಧಿಯಲ್ಲಿ ‘ಶೈಕ್ಷಣಿಕ ಉದ್ದೇಶ’ಗಳ ಬಗ್ಗೆ ಉಪನ್ಯಾಸ ನೀಡಿದರು. ವಿವಿಧ ಅವಧಿಗಳಲ್ಲಿ ಶಿಕ್ಷಕರಿಗೆ ಕೃಷ್ಣ ಶಾಸ್ತ್ರಿ ಬಾಳಿಲ – ಕಲಿಕೆ ಮತ್ತು ಜ್ಞಾನ, ಗಂಗಾಧರ ಬೆಳ್ಳಾರೆ-ವಿದ್ಯಾರ್ಥಿ ಕೌನ್ಸಲಿಂಗ್, ಡಾ. ಶ್ರೀಶ ಕುಮಾರ್ – ವಾಚನಾಸಕ್ತಿ, ಶ್ರೀ ಪ್ರಕಾಶ್ ಮೂಡಿತ್ತಾಯ- ಕ್ರಿಯಾತ್ಮಕ ಕಲಿಕೆ ಮತ್ತು ಬೋಧನೆ, ಬಿ.ವಿ.ಸೂರ್ಯನಾರಾಯಣ – ತರಗತಿ ಸಂವಹನ ಕುರಿತಾಗಿ ಸಂವಾದ ನಡೆಸಿದರು.