‘ಸಾಂಸ್ಕೃತಿಕ ಸಮನ್ವಯ’ ವರ್ಷದ ಹಬ್ಬ – 2024

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಾಂಸ್ಕೃತಿಕ ಸಮನ್ವಯ ‘ವರ್ಷದ ಹಬ್ಬ-2024’ ನಡೆಯಿತು.


ಸ್ವಾಮಿ ವಿವೇಕಾನಂದರ ಬದುಕು ನಮಗೆ ಆದರ್ಶವಾಗಲಿ, ಸಾಮಾಜಿಕ ಕೆಡುಕುಗಳನ್ನು ಸಂಹರಿಸುವ ಶ್ರೀಕೃಷ್ಣರಾಗೋಣ – ಕಿಶೋರ್ ಕುಮಾರ್ ಬೊಟ್ಯಾಡಿ – ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅಭ್ಯಾಗತರಲ್ಲಿ ಒಬ್ಬರಾಗಿದ್ದ, ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಅವರು, ಪುತ್ತೂರು ಮಹಾಲಿಂಗೇಶ್ವರ ದೇವರ ಕೃಪಾ ಕಟಾಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶೀರ್ವಾದ ಮತ್ತು ನಿಮ್ಮಲ್ಲರ ಪ್ರೀತಿ – ಅಭಿಮಾನದ ಬಲದಿಂದ ಇಂದು ನಾನ್ನು ಎಂಎಲ್ಸಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಇದಕ್ಕೆ ಕಾರಣವಾಗಿರುವುದು ಇದೇ ಸ್ಥಳದಲ್ಲಿ ಕಳೆದ ವರ್ಷ ನಡೆದ ರಾಮಕಥಾ ವೈಭವವಾಗಿದೆ ಎಂದು ನೆನಪಿಸಿಕೊಂಡರು. ನಾವೆಲ್ಲರೂ ನಮ್ಮ ತಾಯಿಗೆ ಖುಷಿ ಕೊಡುವಂತಹ ಕೆಲಸವನ್ನು ಮಾಡಬೇಕು. ಭಗವಾನ್ ಶ್ರೀ ಕೃಷ್ಣನಿಗೆ ಇಬ್ಬರು ತಾಯಂದಿರು, ಒಬ್ಬಾಕೆ ಹೆತ್ತ ತಾಯಿ ದೇವಕಿಯಾದರೆ ಇನ್ನೊಬ್ಬಾಕೆ ಆತನನ್ನು ಸಾಕಿ ಸಲಹಿದ ತಾಯಿ ಯಶೋಧೆ. ಶ್ರೀಕೃಷ್ಣ ತನ್ನ ಬಾಲಲೀಲೆಯ ಮೂಲಕ ಎಳವೆಯಲ್ಲೇ ದುಷ್ಟರ ಸಂಹಾರ ಮಾಡುತ್ತಾ ಇಬ್ಬರೂ ತಾಯಂದಿರಿಗೆ ಸಂತೋಷವನ್ನುಕೊಟ್ಟಂತೆ, ನಾವಿಂದು ನಮ್ಮ ಸಮಾಜವನ್ನು ಕಾಡುತ್ತಿರುವ ಮಾದಕ ದ್ರವ್ಯಗಳಂತಹ ಕೆಡುಕುಗಳೆಂಬ ಅಸುರರನ್ನು ಸೋಲಿಸಿ ನಮ್ಮ ಹೆತ್ತವರ ಮನ ಸಂತೋಷಪಡಿಸಬೇಕಿದೆ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಆ ಕೆಡುಕುಗಳನ್ನು ನಮ್ಮ ಬಳಿಯಾಗಲಿ, ನಾವು ಕಲಿಯುತ್ತಿರುವ ಶಿಕ್ಷಣ ಸಂಸ್ಥೆಗಳ ಬಳಿಯಾಗಲಿ ಸುಳಿಯದಂತೆ ನೊಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಕಿಶೋರ್ ಕುಮಾರ್, ನನ್ನ ಅಧಿಕಾರವಧಿಯಲ್ಲಿ ಜನರ ಸೇವೆಯನ್ನು ದೇವರ ಸೇವೆಯೆಂಬಂತೆ ನಿಷ್ಠೆಯಿಂದ ಮಾಡುತ್ತೇನೆ ಎಂದು ಹೇಳಿದರು.

ನಮ್ಮದು ಕನ್ನಡ ಶಾಲೆ, ಈ ಶಾಲೆಯ ಬಗ್ಗೆ ನಮಗೆಲ್ಲಾ ಹೆಮ್ಮೆ ಇದೆ -ಶಶಿಕಲಾ :ಪುತ್ತೂರು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಶಿಕಲಾ ಅವರು ಮಾತನಾಡಿ, ದೇಗುಲಗಳಲ್ಲಿ ವಾರ್ಷಿಕ ಜಾತ್ರೆಗಳು ನಡೆಯುವಂತೆ, ವಿದ್ಯಾದೇಗುಲದಲ್ಲಿ ಅಲ್ಲಿನ ಮಕ್ಕಳ ಪ್ರತಿಭೆಗಳನ್ನು ಅನಾವರಣ ಮಾಡುವ ಉದ್ದೇಶದಿಂದ ವರ್ಷಕ್ಕೊಮ್ಮೆ ನಡೆಯುವ ಉತ್ಸವವೇ ‘ವರ್ಷದ ಹರ್ಷ’ವಾಗಿದೆ. ಆಶಾ ಮಾತಾಜಿ ಅವರು ಪ್ರತೀ ಬಾರಿ ‘ನಮ್ಮದು ಕನ್ನಡ ಶಾಲೆ’ ಎಂದು ಹೆಮ್ಮೆಯಿಂದ ಹೇಳ್ತಿರ್ತಾರೆ. ಅವರು ಹಾಗೆ ಹೇಳುವುದನ್ನು ಕೇಳುವುದೇ ಒಂದು ರೋಮಾಂಚನದ ಅನುಭವ ಮಾತ್ರವಲ್ಲದೇ ನನ್ನ ಕ್ಲಸ್ಟರ್‍ನಲ್ಲಿರುವಂತಹ ಹದಿನೆಂಟು ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ ಇದು ಎಂಬ ಹೆಮ್ಮೆ ನನಗೂ ಇದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಮಕ್ಕಳಿಗೆ ಭಗವದ್ಗೀತೆ ಪುಸ್ತಕ ಉಚಿತವಾಗಿ ನೀಡುವ ಕಾರ್ಯವಾಗಬೇಕು – ಕಿಶೋರ್ ಆಳ್ವ – ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ಮಾತನಾಡಿ ತಮಗೂ ಪುತ್ತೂರಿಗೂ ಇರುವ ನಂಟನ್ನು ನೆನಪಿಸಿಕೊಂಡರು. ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಒಂದು ಕ್ರಾಂತಿಕಾರಿ ಬದಲಾವಣೆಯನ್ನು ಸಮಾಜದಲ್ಲಿ ಉಂಟುಮಾಡಿದೆ. ಅತೀ ಹೆಚ್ಚು ಧಾರ್ಮಿಕ ಕೇಂದ್ರಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿರುವ ಜಿಲ್ಲೆ ದಕ್ಷಿಣ ಕನ್ನಡವಾಗಿದ್ದು ಇಲ್ಲಿಗೆ ಬೃಹತ್ ಉದ್ಯಮಗಳು ಬರಬೇಕೆನ್ನುವುದು ನನ್ನ ಅಭಿಲಾಷೆಯಾಗಿದೆ ಎಂದು ಹೇಳಿದರು.

ನಮ್ಮ ಪ್ರಯತ್ನಕ್ಕೆ ದೈವಬಲ ಸಿಗಬೇಕಾದರೆ ಸಂಸ್ಕಾರ ಮುಖ್ಯ – ಕೃಷ್ಣವೇಣಿ ಪ್ರಸಾದ್ ಮುಳಿಯ – ಮುಳಿಯ ಜ್ಯುವೆಲ್ಲರ್ಸನ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಮಾತನಾಡಿ, ನವರತ್ನ ಹೊದಿಸಿದ ಬಂಗಾರವನ್ನು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಶಿಕ್ಷಕರೆಂಬ ಬಂಗಾರದಿಂದ ಆವರಿಸಲ್ಪಟ್ಟ ನವರತ್ನಗಳಾದ ಮಕ್ಕಳು ತಮ್ಮ ಬದುಕಿನಲ್ಲಿ ಸಂಸ್ಕಾರವಂತರಾಗುತ್ತಾರೆ ಎಂದರು.

ನನ್ನ ವ್ಯಕ್ತಿತ್ವ ರೂಪುಗೊಳ್ಳಲು ನನ್ನ ಅಮ್ಮ ಹಾಗೂ ವಿವೇಕಾನಂದ ಸಂಸ್ಥೆಗಳು ಕಾರಣ – ಡಾ. ಗ್ರೀಷ್ಮಾ ವಿವೇಕ್ ಆಳ್ವ –ಆಳ್ವಾಸ್ ಫಾರ್ಮಸಿಯ ಮುಖ್ಯ ನಿರ್ವಾಹಕಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿನಿ ಡಾ. ಗ್ರೀಷ್ಮಾ ವಿವೇಕ್ ಆಳ್ವಮಾತನಾಡಿ ನನ್ನ ವ್ಯಕ್ತಿತ್ವವನ್ನು ರೂಪಿಸಿದವರಲ್ಲಿ ಇಬ್ಬರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅವರಲ್ಲಿ ಒಬ್ಬರು ನನ್ನ ಅಮ್ಮ ಹಾಗೂ ಇನ್ನೊಂದು ವಿವೇಕಾನಂದ ವಿದ್ಯಾಸಂಸ್ಥೆ ಎಂದು ಅಭಿಮಾನದ ನುಡಿಗಳನ್ನಾಡಿದರು.

ನೈತಿಕ ಶಿಕ್ಷಣ – ಸಂಸ್ಕಾರ ರೂಪಿಸುವಿಕೆ ವಿವೇಕಾನಂದ ಸಂಸ್ಥೆಗಳ ಹೆಗ್ಗಳಿಕೆ – ಮುರಳೀಧರ ಕೆ – ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿರುವ ಮುರಳೀಧರ ಕೆ ಅವರು ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಅವಿರತ ಶ್ರಮ ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹ ಮತ್ತು ಪೋಷಕರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಇಷ್ಟು ಸುಂದರವಾಗಿ ಮೂಡಿಬರಲು ಸಾಧ್ಯವಾಗಿದೆ ಎಂದರು.

 

     

Highslide for Wordpress Plugin