ನೂತನ ಪಾಕ ಶಾಲೆ – ಸಾನ್ನಿಧ್ಯ-ಲೋಕಾರ್ಪಣೆ

ಹಣದ ಹಿಂದೆ ಹೋಗುವ ಬದಲು ಗುಣದ ಹಿಂದೆ ಹೋಗುವಂತಾಗಬೇಕು – ಡಾ.ಪ್ರಭಾಕರ ಭಟ್

ಹಿಂದು ಸಮಾಜದ ನಂಬಿಕೆಗಳನ್ನು ಗಟ್ಟಿ ಮಾಡುವ ಸಂಗತಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಿಂದ ಆಗುತ್ತಿದೆ. ಹಣದ ಹಿಂದೆ ಹೋಗುವ ಬದಲು ಗುಣದ ಹಿಂದೆ ಹೋಗುವ ಮನಸ್ಸು ನಮ್ಮದಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಹೇಳಿದರು.
ತೆಂಕಿಲ ವಿವೇಕನಗರದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶೇಷಾದ್ರಿಯಲ್ಲಿ ‘ಅನ್ನಪೂರ್ಣ’ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ ಇದರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ‘ಸಾನ್ನಿಧ್ಯ’ ಪಾಕಶಾಲೆಯಲ್ಲಿ ತೆಂಗಿನ ಹಿಂಗಾರವನ್ನು ಅರಳಿಸಿ ಬಳಿಕ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಭಾಷೆ ದೇವರ ಭಾಷೆ, ದೇವರ ಜೊತೆ ಸಂವಾದ ಮಾಡುವ ಭಾಷೆ, ಸಂಸ್ಕೃತಿ ಉಳಿಸುವ ಭಾಷೆ. ನಮ್ಮ ಮನೆಗಳು ನಮ್ಮ ಭಾಷೆಯನ್ನು ಇಟ್ಟುಕೊಂಡು ನಮ್ಮ ಸಂಸ್ಕೃತಿಯನ್ನು ಬೆಳೆಸುವ ಮನೆಗಳಾಗಬೇಕು. ವ್ಯವಹಾರದಲ್ಲಿ ಯಾವ ಭಾಷೆಯನ್ನು ಬಳಸಿದರೂ ಮನೆಯಲ್ಲಿ ನಮ್ಮ ಭಾಷೆ ಇರಲಿ ಈ ನಿಟ್ಟಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅನ್ನದಾನ, ವಿದ್ಯಾದಾನ ಮತ್ತು ಆಧ್ಯಾತ್ಮಿಕ ದಾನ ಈ ಮೂರು ಸಂಗತಿಗಳು ನಡೆಯುತ್ತಿವೆ. ಶಾಲೆಯ ಪೋಷಕರಾಗಿರುವ ನೀವು ಇನ್ನಷ್ಟು ವಿದ್ಯಾರ್ಥಿಗಳು ಈ ಶಾಲೆಗೆ ಬರುವಂತೆ ಶಾಲೆಯ ಉತ್ತಮ ಸಂಗತಿಗಳನ್ನು ತಿಳಿಸುವ ರಾಯಭಾರಿಗಳಾಗಬೇಕು ಎಂದರು.
ನೀರು ಕೇಳಿದರೆ ಹಾಲು ಕೊಡುವ ದೇಶ ಭಾರತ. ಜೀವನಕ್ಕೆ ಏನೇನೂ ಬೇಕೋ ಅದೆಲ್ಲವನ್ನೂ ಕೊಡುತ್ತಾ ಬಂದ ದೇಶ ನಮ್ಮದು. ಅದನ್ನು ನಾವು ನೆನಪು ಮಾಡಿಕೊಳ್ಳುತ್ತಾ ನಮ್ಮ ಮಕ್ಕಳಿಗೆ ನೆನಪು ಮಾಡಿಸಬೇಕು. ವಿವೇಕಾನಂದ ವಿದ್ಯಾಸಂಸ್ಥೆ ಯೋಚನೆ ಮಾಡಿದ್ದು ಹಣದ ಹಿಂದೆಯಲ್ಲ ಗುಣದ ಹಿಂದೆ. ಅದಕ್ಕೆ ಪೂರಕವಾಗಿ ನಿಮ್ಮ ಮನೆಗಳಿರಬೇಕು. ಸ್ವಂತದ್ದನ್ನ್ನು ಬಿಟ್ಟು ಸಮಾಜಕ್ಕೆ ಚಿಂತನೆ ಮಾಡುವ ಮನೆಗಳು ಬೇಕು. ಅದಕ್ಕೆ ಪೂರಕವಾಗಿ ಅನ್ನಪೂರ್ಣ ಸಮಿತಿ ರಚನೆಯಾಗಿದೆ ಎಂದು ಡಾ. ಪ್ರಭಾಕರ ಭಟ್ ಹೇಳಿದರು.

ಅನ್ನದಾನ ಉತ್ತಮ ರೀತಿಯಲ್ಲಿ ನಡೆಯಲೆಂದು ಪ್ರಾರ್ಥಿಸುವೆ: ‘ಅನ್ನಪೂರ್ಣ’ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ ಇದರ ಲೋಕಾರ್ಪಣೆಗೆ ದೀಪ ಪ್ರಜ್ವಲಿಸಿದ ಪ್ರಗತಿಪರ ಕೃಷಿಕ ಗುಂಡ್ಯಡ್ಕ ವಾಸು ಪೂಜಾರಿ ಅವರು ಮಾತನಾಡಿ ಪಾಕಶಾಲೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಅದನ್ನು ಸಾಧ್ಯ ಎಂದು ಇಲ್ಲಿ ಮಾಡಿ ತೋರಿಸಿದ್ದಾರೆ. ಮುಂದೆ ಇಲ್ಲಿ ಅನ್ನದಾನದ ಕೆಲಸ ಉತ್ತಮ ರೀತಿಯಲ್ಲಿ ನಡೆಯುವಂತೆ ಶ್ರೀ ಮಹಾಲಿಂಗೇಶ್ವರನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ವಿವೇಕಾನಂದರ ಪುಸ್ತಕಗಳನ್ನು ಓದಿದರೆ ಮಕ್ಕಳು ಉತ್ತಮರಾಗುತ್ತಾರೆ: ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಅವರು ಮಾತನಾಡಿ ವಿದ್ಯಾದಾನ ಮತ್ತು ಅನ್ನದಾನ ಶ್ರೇಷ್ಠ ದಾನಗಳು. ಹಿಂದೆ ಹಸಿವಿನ ಶಿಕ್ಷಣವಿತ್ತು. ಗುರುಕುಲದಲ್ಲಿ ಭಿಕ್ಷಾಟನೆ ಮೂಲಕ ಶಿಕ್ಷಣವಿತ್ತು. ಇವತ್ತಿನ ಬದಲಾದ ಶಿಕ್ಷಣದಲ್ಲಿ ಮಕ್ಕಳನ್ನು ಯಾವ ಶಾಲೆಗೆ ದಾಖಲಾತಿ ಮಾಡುವುದು ಎಂದು ಅಳೆದು ತೂಗುವ ಕೆಲಸ ನಡೆಯುತ್ತದೆ. ಕೊನೆಗೆ ಮಕ್ಕಳಿಗಿಂತ ಪೆÇೀಷಕರೇ ವಿದ್ಯಾರ್ಥಿಗಳಾಗುತ್ತಾರೆ. ಆದರೆ ನಮ್ಮ ಮಕ್ಕಳಿಗೆ ಬಡತನದಿಂದ ಹೇಗೆ ಮೇಲೆ ಬಂದು ಶಿಕ್ಷಣ ಕಲಿಯುವುದು ಎಂದು ಸರ್ ಎಂ ವಿಶ್ವೇಶ್ವರಯ್ಯನವರಂಥವರ ಚರಿತ್ರೆಗಳನ್ನು ತಿಳಿಸಿ, ಟಿ.ವಿ ಮೊಬೈಲ್ ಬದಲು ಪುಸ್ತಕ ಕೊಡಿ. ಪುಸ್ತಕ ಮಕ್ಕಳನ್ನು ಎಲ್ಲಿಗೆ ಬೇಕಾದರೂ ನಿಲ್ಲಿಸುತ್ತದೆ. ಅದರಲ್ಲೂ ವಿವೇಕಾನಂದರ ಪುಸ್ತಕ ಓದಿದರೆ ಖಂಡಿತಾ ಮಕ್ಕಳು ಉತ್ತಮರಾಗುತ್ತಾರೆ ಎಂದರು.

ನಮ್ಮ ಮನೆಯಂತೆ ಪಾಕ ಶಾಲೆಯ ಕೆಲಸ ಮಾಡಿದ್ದೇವೆ: ದ್ವಾರಕ ಕನ್‍ಸ್ಟ್ರಕ್ಷನ್‍ನ ಮಾಲಕ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ನಮ್ಮ ಮನೆಯನ್ನು ಹೇಗೆ ನಿರ್ಮಾಣ ಮಾಡುತ್ತೇವೆಯೋ ಅದೇ ರೀತಿ ಸಾವಿರಾರು ಮಕ್ಕಳು ಅನ್ನ ಸ್ವೀಕರಿಸುವ ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ಮಾಡಿದ್ದೇವೆ. ಇಲ್ಲಿ ಮಕ್ಕಳಿಗೆ ಪೂರ್ಣ ಫಲ ಸಿಗುತ್ತದೆ ಎಂದು ಹೇಳಿದರು. 

ಆಗಿರುವುದು ಕಿಂಚಿತ್, ಆಗಬೇಕಾಗಿರುವುದು ಇನ್ನಷ್ಟು :ಅನ್ನಪೂರ್ಣ ಯೋಜನಾ ಸಮಿತಿ ಅಧ್ಯಕ್ಷ ಸುಹಾಸ್ ಮಜಿ ಅವರು ಮಾತನಾಡಿ ಇವತ್ತು ಆದ ಕೆಲಸ ಕಿಂಚಿತ್ತು. ಆಗಬೇಕಾಗಿರುವುದು. ಇನ್ನಷ್ಟು ಇದೆ. ಈ ಕಾರ್ಯದಲ್ಲಿ ಪೋಷಕರ , ದಾನಿಗಳಿಂದ ಸಿಕ್ಕಿದ ಪ್ರೋತ್ಸಾಹದ ಶಕ್ತಿ ನಮಗೆ ಮುನ್ನಡೆಯಲು ಸಾಧ್ಯವಾಯಿತು. ಶಾಲಾ ಯೋಜನೆಗೆ ಪೋಷಕರು ದಾನ ನೀಡಿ ದಾನಿಗಳಾದರೆ ಪೋಷಕರಲ್ಲದ ದಾನಿಗಳು ದಾನ ನೀಡಿ ಪೋಷಕರಾದದ್ದು ನಾವು ಸಮಾಜಕ್ಕೆ ನೀಡುವ ಮಹತ್ತರವಾದ ಸಂದೇಶವಾಗಿದೆ.. ಈ ನಿಟ್ಟಿನಲ್ಲಿ ಪೋಷಕರು ಆಗಾಗ ಶಾಲೆಗೆ ಬರುವಂತಾಗಬೇಕು ಎಂದರು.

ವಿದ್ಯಾರ್ಥಿಗಳು ಸಮಾಜ ಮುಖಿ ಪ್ರಜೆಯಾಗಿ ಮೂಡಿ ಬರಲಿ: ಮಹಾವೀರ ಮೆಡಿಕಲ್ ಸೆಂಟರ್‍ನ ಡಾ. ಅರ್ಚನಾ ಕೆ ನಾಯಕ್ ಅವರು ಮಾತನಾಡಿ ವಿದ್ಯಾದಾನದೊಂದಿಗೆ ಅನ್ನದಾನ ಶ್ರೇಷ್ಠ. ಈ ನಿಟ್ಟಿನಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಮುಖು ಪ್ರಜೆಯಾಗಿ ಮೂಡಿ ಬರಲಿ ಎಂದು ಹಾರೈಸಿದರು.

2 ತಿಂಗಳ ಕನಸು ನಿರಂತರ ಪ್ರಯತ್ನದ ಫಲ :ಶಾಲಾ ಅನ್ನಪೂರ್ಣ ಯೋಜನಾ ಸಮಿತಿ ಕಾರ್ಯದರ್ಶಿ ಶ್ರೀಹರಿ ಅವರು ಸ್ವಾಗತಿಸಿ ಮಾತನಾಡಿ 2 ತಿಂಗಳ ಹಿಂದಿನ ಕನಸು ನಿರಂತರ ಪ್ರಯತ್ನದ ಫಲವಾಗಿ ನನಸಾಗಿದೆ. ಇವತ್ತು ಅನ್ನಪೂರ್ಣ ಪಾಕಶಾಲೆ ನಮ್ಮ ಎದುರು ಸಾಕಾರಗೊಂಡಿದೆ. ಹಾಗಾಗಿ ವಿದ್ಯಾದಾನದೊಂದಿಗೆ ಅನ್ನದಾನ ಮುಂದುವರಿಯಲಿದೆ ಎಂದರು.

ಸರ್ಟಿಫಿಕೇಟ್‌ಗಿಂತ ಧೈರ್ಯ, ವಿವೇಕ ಬೇಕು: ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಅವರು ಅನ್ನಪೂರ್ಣ ಯೋಜನೆಯ ಪೂರ್ಣ ಮಾಹಿತಿ ನೀಡಿದರು. ಇವತ್ತು ಸರ್ಟಿಫಿಕೇಟ್ ಗಿಂತ ಧೈರ್ಯ ಮತ್ತು ವಿವೇಕ ಬೆಳೆಸುವ ಶಿಕ್ಷಣ ಅಗತ್ಯವಿದ್ದು ನಮ್ಮೀ ಯೋಜನೆ ಕೈಗೊಳ್ಳಲು ಧೈರ್ಯ ಮತ್ತು ವಿವೇಕಯುಕ್ತವಾದ ನಡೆಯಿಂದ ಪೋಷಕರ, ಊರ ದಾನಿಗಳ ಸಹಕಾರದೊಂದಿಗೆ ಮುನ್ನಡಿ ಇಡುತ್ತಿದ್ದೇವೆ. ಯೋಜನೆಯ ಹಿನ್ನೋಟ ೨೫% ಆಗಿದ್ದು ಮುನ್ನೋಟ ೭೫% ದಷ್ಟಿದೆ. ಮುಂದೆಯೂ ನಮ್ಮೆಲ್ಲಾ ಪೋಷಕರು ನಮ್ಮ ಜೊತೆ ಇದ್ದು ಈ ಯೊಜನೆಯನ್ನು ಮುನ್ನಡೆಸಿ ಕೊಡಬೇಕೆಂದು ಕೇಳಿಕೊಂಡರು.

ಅಭಿವಂದನಾ ಗೌರವ :ಅನ್ನಪೂರ್ಣ ಯೋಜನೆಯ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ದ್ವಾರಕಾ ಕನ್‍ಸ್ಟ್ರಕ್ಷನ್ ಮಾಲಕ ಗೋಪಾಲಕೃಷ್ಣ ಭಟ್ ದಂಪತಿ ಮತ್ತು ಹಿರಿಯ ವಿದ್ಯಾರ್ಥಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಕಾಸ್ ಕಡಮಣ್ಣಾಯ, ಅನ್ನಪೂರ್ಣ ಯೋಜನಾ ಸಮಿತಿ ಅಧ್ಯಕ್ಷ ಸುಹಾಸ್ ಮಜಿ ಅವರ ಪತ್ನಿ ಡಾ. ಆಶಾ ಅವರನ್ನು ಸಂಸ್ಥೆಯ ವತಿಯಿಂದ ಅಭಿವಂದಿಸಿ ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿ ಸದಸ್ಯ ಕೆದಿಲ ಸುಬ್ರಹ್ಮಣ್ಯ ಭಟ್ ಮತ್ತು ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಅಭಿವಂದನಾ ಮತುಗಳನ್ನಾಡಿದರು.

     

ಈ ಸಂದರ್ಭ ಅನ್ನಪೂರ್ಣ ಪಾಕಶಾಲೆ ‘ಸಾನ್ನಿಧ್ಯ’ದ ಲೋಕಾರ್ಪಣೆ ಮತ್ತು ವೈದಿಕ ಕಾರ್ಯಕ್ರಮಗಳಿಗೆ ಪಂಚಾಂಗ ದಿನ ಮಾಹಿತಿ ನೀಡಿದ ಯರ್ಮುಂಜ ಶಂಕರ ಜೋಯಿಸ ಅವರನ್ನು ಗೌರವಿಸಲಾಯಿತು. ಅನ್ನಪೂರ್ಣ ಕಟ್ಟಡ ಕಾಮಗಾರಿ ಕೆಲಸ ನಿರ್ವಹಿಸಿದ ಶರತ್ ಮತ್ತು ತಂಡಕ್ಕೆ ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

         

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಸಂತ ಮಾಧವ, ಶಾಲಾ ಆಡಳಿತ ಮಂಡಳಿ ಸಂಚಾಲಕ ವಸಂತ ಸುವರ್ಣ ಉಪಸ್ಥಿತರಿದ್ದರು. ವಿದುಷಿ ಪ್ರೀತಿಕಲಾ ಅವರು ವೈಯಕ್ತಿಕ ಗೀತೆ ಹಾಡಿದರು. ಪ್ರಜ್ಞಾ ನಿಡ್ವಣ್ಣಾಯ ಪ್ರಾರ್ಥಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ನಾಯಕ್ ವಂದಿಸಿದರು. ಗೀತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

 

Highslide for Wordpress Plugin