ಶಾಲೆ ಮತ್ತು ಪೋಷಕರ ನಡುವೆ ಇರುವ ಉತ್ತಮ ಬಾಂಧವ್ಯ ಮಗುವಿನ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪೋಷಕರಾದ ನಮ್ಮಲ್ಲಿ ಯಾವಾಗಲೂ ಶಾಲೆ ಹಾಗೂ ಶಿಕ್ಷಕರ ಬಗ್ಗೆ ನಂಬಿಕೆ ಹಾಗೂ ಧೈರ್ಯವಿರಬೇಕು – ಗೋಪಾಲಕೃಷ್ಣ, ಕನ್ನಡ ಶಿಕ್ಷಕರು ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ ಪೂರ್ವ ಪ್ರಾಥಮಿಕದಿಂದ 4 ನೇ ತರಗತಿವರೆಗಿನ ಪೋಷಕರ ಸಭೆ ನಡೆದಿದ್ದು ಶ್ರೀಯುತರು ಅಭ್ಯಾಗತರಾಗಿ ಭಾಗವಹಿಸಿ ಪೋಷಕರಿಗೆ ಮಕ್ಕಳ ಕುರಿತು ಇರಬೇಕಾದ ಕಾಳಜಿಯ ಬಗ್ಗೆ ತಿಳಿಸಿದರು.



ದೀಪ ಪ್ರಜ್ವಲನೆ, ಪುಷ್ಪಾರ್ಚನೆಯೊಂದಿಗೆ ಆರಂಭವಾದ ಸಭೆಯಲ್ಲಿ ಶಾಲಾ ವಾರ್ಷಿಕ ಗೀತೆಯನ್ನು ಪೋಷಕರಿಗೆ ಹೇಳಿಕೊಡಲಾಯಿತು. ಸರಸ್ವತಿ ವಂದನೆಯೊಂದಿಗೆ ಶುಭಾರಂಭವಾಗುವ ಶಾಲಾ ಪ್ರಾರ್ಥನೆಯ ಮಹತ್ವವನ್ನು ತಿಳಿಸಿದ ಶಿಕ್ಷಕ ವೃಂದ ಶಾಲಾ ಪ್ರಾರ್ಥನೆಯನ್ನು ಹಾಡಿದರು. ಪೋಷಕರಿಗೆ ಶಾಲಾ ವಾರ್ಷಿಕ ಯೋಜನೆಯನ್ನು ತಿಳಿಸಿದ ಅನಂತರ ಶಿಕ್ಷಕರ ಹಾಗೂ ಪೋಷಕರ ನಡುವೆ ಪಠ್ಯ ಹಾಗೂ ಪಠ್ಯಪೂರಕ ವಿಷಯಗಳ ಬಗ್ಗೆ ಸಂವಾದ ನಡೆಯಿತು. ಪ್ರಸ್ತಕ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘಕ್ಕೆ ತರಗತಿಯ ಪ್ರತಿ ವಿಭಾಗಗಳಿಂದ ಇಬ್ಬರು ಪೋಷಕ ಪ್ರತಿನಿಧಿಗಳು ಆಯ್ಕೆಯಾದರು.
ಸಭಾಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ವಸಂತ ಸುವರ್ಣ ಮಾತನಾಡಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಜಾರ್ಥದ ಪ್ರತಿನಿಧಿಗಳಾಗಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುತ್ತಿರುವ ಪೋಷಕರಿಗೆ ಅಭಿನಂದನೆ ತಿಳಿಸಿದರು.
ವಿಶ್ವಯೋಗ ದಿನಾಚರಣೆಯ ಅಂಗವಾಗಿ-’ಸ್ವಾಸ್ಥ್ಯ’ ಚಟುವಟಿಕಾ ಸಂಘದಿಂದ ಹಮ್ಮಿಕೊಳ್ಳಲಾದ ’ಸ್ವಸ್ಥ-ಸ್ವಾಸ್ಥ್ಯ’ ಕಾರ್ಯಕ್ರಮದಡಿಯಲ್ಲಿ ಪೋಷಕರಿಗೆ ಸರಳ ವ್ಯಾಯಾಮ ಹಾಗೂ ಪ್ರಾಣಾಯಾಮ ಪ್ರಾತ್ಯಕ್ಷಿಯನ್ನು ನಡೆಸಲಾಯಿತು.
ಸ್ವಾಗತ ಪ್ರಾಸ್ತಾವಿಕದೊಂದಿಗೆ ಮುಂದುವರಿದ ಪೋಷಕರ ಸಭೆ ಧನ್ಯವಾದ, ಶಾಂತಿ ಮಂತ್ರದೊಂದಿಗೆ ಸಂಪನ್ನಗೊಂಡಿತು.