ದಿನಾಂಕ 18 -2 -2022 ಶನಿವಾರದಂದು ಪ್ರಸಕ್ತ ಶೈಕ್ಷಣಿಕ ಸಾಲಿನ ನಾಲ್ಕನೇ ಹಂತದ ಪೋಷಕರ ಸಭೆ ಕರೆಯಲಾಗಿತ್ತು. FA-4 ಪರೀಕ್ಷೆಯ ಪ್ರಗತಿ ಪರಿಶೀಲನೆಗೆ ಕರೆಯಲಾದ ಸಭೆಗೆ ಕ್ಲಪ್ತ ಸಮಯಕ್ಕೆ ಬಂದು ತಮ್ಮ ಮಕ್ಕಳ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳ ಅವಲೋಕನದಲ್ಲಿ ಪೋಷಕರು ಭಾಗವಹಿಸಿದರು.
ವಿಭಾಗಶಃ ಕರೆಯಲಾದ ಈ ಸಭೆ ಆಯಾ ತರಗತಿಯಲ್ಲಿ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ನಡೆಯಿತು.1ರಿಂದ 9ನೇ ತರಗತಿವರೆಗೆ ಮಕ್ಕಳ ಪೋಷಕರು ವ್ಯಕ್ತಪಡಿಸಿದ ಅಭಿಪ್ರಾಯ ಸಲಹೆಗಳು ಈ ಕೆಳಗಿನಂತಿವೆ.





ಅಭಿಪ್ರಾಯ
???? ಒಂದೊಂದು ಪಾಠವಾದಂತೆ ಘಟಕ ಪರೀಕ್ಷೆಗಳನ್ನು ಮಾಡುವುದರಿಂದ ಮಕ್ಕಳು ಕಲಿಕೆಗೆ ಮಹತ್ವ ನೀಡಲು ಸಹಕಾರವಾಗುತ್ತಿದೆ. ಮಕ್ಕಳ ಕಲಿಕಾ ವಿಷಯಗಳಿಗೆ ಪ್ರಾಶಸ್ತ್ಯ ನೀಡುತ್ತಿರುವುದು ಉತ್ತಮ ಅಂಶ.
???? ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ನೋಟ್ಸ್ ತಯಾರಿ, ಪುನರಾವರ್ತನೆ ಮಾಡುವ ಹಾಗೂ ಮಾಡಿಸುವ ಬಗ್ಗೆ ಶಿಕ್ಷಕರು ವಿಶೇಷ ಗಮನ ಹರಿಸುತ್ತಿದ್ದಾರೆ.
???? ಕಲಿಕಾ ಹಿನ್ನಡೆ ಇದ್ದಲ್ಲಿ,…. ತರಗತಿಗೆ ನಿರಂತರ ಗೈರು ಹಾಜರಾದಲ್ಲಿ ದೂರವಾಣಿ ಮುಖಾಂತರ ಶಿಕ್ಷಕರು ವಿಚಾರಿಸುತ್ತಿರುವುದು ಖುಷಿಯಾಗಿದೆ.
???? ಕೊರೊನ ಸಮಯದ ಮಕ್ಕಳ ಚಟುವಟಿಕೆಗಳಲ್ಲಿ ಇದ್ದ ಭಯ ಈಗ ದೂರವಾಗುತ್ತಿದೆ. ಮಕ್ಕಳು ಮೊಬೈಲ್ ಉಪಯೋಗದ ಚಟದಿಂದ ನಿಧಾನಕ್ಕೆ ದೂರವಾಗುತ್ತಿದ್ದಾರೆ.
???? ಅಟಲ್ ಟಿಂಕರಿಂಗ್ ಪ್ರಯೋಗಾಲಯದ ತರಗತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ, ಚಟುವಟಿಕೆ, ಪ್ರಯೋಗ ಮಾದರಿಗಳ ತಯಾರಿಯ ವಿಷಯಗಳನ್ನು ಜೋಡಿಸಿಕೊಂಡಿರುವುದು ಮಕ್ಕಳಿಗೆ ಖುಷಿಯಾಗಿದೆ.
???? ಪಠ್ಯಪೂರಕ ತರಗತಿಗಳ ಪುನರಾರಂಭವಾಗಿರುವುದು ಮತ್ತು ನಿರಂತರವಾಗಿ ನಡೆಯುತ್ತಿರುವುದು ಸಮಾಧಾನ ತಂದಿದೆ.
???? ಯಾವುದೇ ಕಾರಣಕ್ಕೆ ಮುಂದೆ ಆನ್ಲೈನ್ – ಆಫ್ಲೈನ್ ತರಗತಿಗಳು ಆರಂಭವಾಗುವ ಪರಿಸ್ಥಿತಿ ಉಂಟಾಗದಿರಲಿ.
???? ಶಾಲಾ ಕೈತೋಟ – ಹೂ ತೋಟಗಳ ಕೆಲಸಗಳಲ್ಲಿ ಮಕ್ಕಳಿಗೆ ಕುತೂಹಲ ಮತ್ತು ಖುಷಿ ಇದೆ.
???? 75ರ ಸ್ವಾತಂತ್ರ್ಯ ಸಂಭ್ರಮಕ್ಕೆ ಸಂಬಂಧಿಸಿ ಪ್ರತಿದಿನ ಮಕ್ಕಳಿಂದ ದೇಶಪ್ರೇಮಿ ಯೋಧರ, ವೀರರ ಕಥೆಗಳನ್ನು ಹೇಳಿಸುತ್ತಿರುವುದನ್ನು ಕೇಳಿದ ಮಕ್ಕಳು ಮನೆಗೆ ಬಂದು ಈ ಕಥೆಯನ್ನು ಹೇಳುತ್ತಾರೆ.
???? ಮಕ್ಕಳಿಗೆ ಗುಂಪುಶಃ ಇಂಗ್ಲಿಷ್ ಸಂವಹನ, ವ್ಯಾಕರಣ ತರಗತಿಗಳನ್ನು ನಡೆಸುತ್ತಿರುವುದು ಇಂಗ್ಲಿಷ್ ಭಾಷಾ ಕಲಿಕೆಗೆ ಸಹಕಾರಿಯಾಗಿದೆ.
???? ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡ ಇವರು ಒಂದರಿಂದ ಏಳನೇ ತರಗತಿವರೆಗಿನ ಪಠ್ಯ ವಿಷಯಗಳಿಗೆ ಸಂಬಂಧಿಸಿ ನೀಡುತ್ತಿರುವ ಶೈಕ್ಷಣಿಕ ಸಂಪನ್ಮೂಲಗಳು ಪರಿಣಾಮಕಾರಿಯಾಗಿದ್ದು ಮಕ್ಕಳು ತುಂಬಾ ಆಸಕ್ತಿಯಿಂದ ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ.
???? ಮಕ್ಕಳ ಪಠ್ಯ – ಪಠ್ಯಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ವಿದ್ಯಾರ್ಥಿ ಕೃತಿ ಸಂಪುಟದಲ್ಲಿ ಸಂಗ್ರಹಿಸಿದ್ದು ಉತ್ತಮ ವಿಷಯ.
ಸಲಹೆ
???? ಮಕ್ಕಳ ನೋಟ್ಸ್ ಗಳಲ್ಲಿ ಕೆಲವೊಂದು ತಪ್ಪುಗಳಿದ್ದಲ್ಲಿ ಪರೀಕ್ಷೆಗೆ ಅದೇ ತಪ್ಪುಗಳನ್ನು ಪುನರಾವರ್ತಿಸುತ್ತಿದ್ದಾರೆ.
???? ಮೊಬೈಲ್ಗಳಲ್ಲಿ ಸ್ನೇಹಿತರ ಮುಖಾಂತರ ನೋಟ್ಸ್ ಕಳುಹಿಸುವಂತೆ ಹೇಳಿ ಅದರಿಂದ ನೋಟ್ಸ್ ಬರೆಯುತ್ತಿದ್ದಾರೆ. ಕೆಲವೊಮ್ಮೆ ಈ ಬಗ್ಗೆ ಸುಳ್ಳು ಹೇಳುತ್ತಾರೆ. ಮೊಬೈಲ್ನಲ್ಲಿ ಅನಗತ್ಯ ಮಾತು, ಆಟಗಳನ್ನು ಆಡುತ್ತಿದ್ದು ಕೇಳಿದರೆ ಕೋಪ ಮಾಡುತ್ತಾರೆ ಈ ಬಗ್ಗೆ ಶಿಕ್ಷಕರು ಹೇಳಿದರೆ ಉತ್ತಮ. ಕಥೆ ಅಥವಾ ಉತ್ತಮ ಪುಸ್ತಕಗಳನ್ನು ಓದುವಂತೆ ತಿಳಿಸುವುದು ಸೂಕ್ತ.
???? ವಿಜ್ಞಾನ – ಸಮಾಜ ವಿಷಯಗಳ ನೋಟ್ಸ್ ಪಾಠ ಆಗುತ್ತಿದ್ದಂತೆ ಕೊಟ್ಟರೆ ಉತ್ತಮ.
ಶಿಕ್ಷಕರ ಸ್ಪಷ್ಟನೆ
ಮೊಬೈಲ್ ಮುಖಾಂತರ ನೋಟ್ಸ್ ಗಳನ್ನು ಕಳುಹಿಸುತ್ತಿಲ್ಲ. ಆದ್ದರಿಂದ ಮಕ್ಕಳು ಪಠ್ಯ ಪುಸ್ತಕ ಓದಿ ನೋಟ್ಸ್ ತಯಾರಿ ಮಾಡಿಕೊಳ್ಳಬೇಕು . ಇದರಿಂದ ಮಕ್ಕಳ ಅರ್ಥೈಸುವ ಅರಿವು ಬೆಳೆಯುತ್ತದೆ.
ಮಕ್ಕಳ ಮಾತು-ವರ್ತನೆಗಳಲ್ಲಿ ನೇತ್ಯಾತ್ಮಕ ಅಂಶಗಳು ಕಂಡುಬಂದಲ್ಲಿ ದಯವಿಟ್ಟು ಗಮನಹರಿಸಿ, ಶಿಕ್ಷಕರೊಂದಿಗೆ ಈ ಬಗ್ಗೆ ಮಾತನಾಡಿ.
ತಮ್ಮ ಕೆಲಸಗಳಲ್ಲಿ, ಸ್ವಚ್ಛತೆಯನ್ನು ಅಭ್ಯಸಿಸುವಲ್ಲಿ, ಹಣದ ಖರ್ಚು-ವೆಚ್ಚಗಳ ಬಗ್ಗೆ , ಸಂಬಂಧಗಳ ನಿರ್ವಹಣೆಯ ಬಗ್ಗೆ, ಸಾಮಾಜಿಕ ಜವಾಬ್ದಾರಿ, ಸಮಯ ನಿರ್ವಹಣೆ….. ಇತ್ಯಾದಿಗಳ ಬಗ್ಗೆ ಪೋಷಕರು ಮಕ್ಕಳೊಂದಿಗೆ ಮಾತನಾಡಬೇಕು. ಪ್ರಸಕ್ತ ಸಾಲಿನ ‘ಹಸಿರು ಶಾಲೆ’ ಯೋಜನೆಗೆ ಸಹಕಾರ ನೀಡುತ್ತಿರುವ ಪೋಷಕರಿಗೆ ಶಿಕ್ಷಕರು ಧನ್ಯವಾದ ತಿಳಿಸಿದರು.