ಶಾಲಾ ವೃತಿಕಾ ವಿಜ್ಞಾನ ಸಂಘದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಯೋಜನೆಗಳಲ್ಲಿ ಒಂದಾದ ‘ಹಸಿರು – ಶಾಲಾ’ ಪರಿಕಲ್ಪನೆಗೆ ವರ್ಷಾರಂಭದಲ್ಲಿ ಚಾಲನೆ ದೊರೆತಿತ್ತು. ಈ ಹಿಂದೆ ಮಕ್ಕಳು ತಮ್ಮ ಹುಟ್ಟುಹಬ್ಬದಂದು ತರಗತಿ ಗ್ರಂಥಾಲಯಕ್ಕೆ ಒಂದು ಪುಸ್ತಕ ನೀಡುವ ಪರಿಪಾಠವಿತ್ತು. ಈ ಶೈಕ್ಷಣಿಕ ವರ್ಷ ಮಗು ತನ್ನ ಹುಟ್ಟು ಹಬ್ಬದಂದು ಶಾಲಾ ವೃತಿಕಾ ವಿಜ್ಞಾನ ಸಂಘಕ್ಕೆ ಒಂದು ಗಿಡ ನೀಡಿ ಹಸಿರು ಶಾಲೆ ಯೋಜನೆಗೆ ಕೈಜೋಡಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಕೆಲವು ಪೋಷಕರು ಹೂವು, ತರಕಾರಿ, ಅಡಿಕೆ, ಬಾಳೇ ಸಸಿಗಳನ್ನು ಶಾಲೆಗೆ ನೀಡಿರುತ್ತಾರೆ. ಇಲ್ಲಿಂದಲೇ ಶಾಲಾ ಕೈತೋಟ ರಚನಾ ಕಾರ್ಯ ಮುಂದುವರಿಯಿತು. ಇದರ ಅಂಗವಾಗಿ ಪೋಷಕರ ಸಭೆಯಂದು ಮಕ್ಕಳು ಹಾಗೂ ಶಿಕ್ಷಕರು ನೆಟ್ಟು ಬೆಳೆಸಿದ ಒಂದಷ್ಟು ಗಿಡಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು. ಮಕ್ಕಳ ಆಸಕ್ತಿ, ಶ್ರಮ, ನಿರಂತರ ತೊಡಗಿಕೊಳ್ಳುವಿಕೆಯನ್ನು ಕಂಡ ಪೋಷಕರಿಗೂ ಖುಷಿ. ಗಿಡಗಳನ್ನು ಖರೀದಿಸಿ ಹಸಿರನ್ನು ಪಸರಿಸಲು ಸಹಕರಿಸುತ್ತಿರುವ ಪೋಷಕರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದದವರು ಕೃತಜ್ಞತೆ ಹೇಳಿದರು.







ಮೂರು ವರ್ಷದ ಹಿಂದೆ ನಾವು ಈ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಇದರ ಅಂಗವಾಗಿ ಮೊದಲು ಆರಂಭಿಸಿದ್ದೆ ಬಾಳೆಯ ತೋಟ. ಶಾಲಾ ಶಿಕ್ಷಕರಾದ ವಿಶ್ವನಾಥ ಇವರ ನೇತೃತ್ವದಲ್ಲಿ ಸುಮಾರು 20 ಕ್ಕಿಂತಲೂ ಹೆಚ್ಚಿನ ಬಗೆಯ ಬಾಳೇ ಗಿಡಗಳನ್ನು ನೆಟ್ಟು, ಬೆಳೆದ ಹಣ್ಣುಗಳನ್ನು ಮಕ್ಕಳಿಗೆ ಹಂಚಲಾಗುತ್ತಿತ್ತು. ಮುಂದುವರಿದ ಭಾಗವಾಗಿ ಇದೀಗ ಅಡಿಕೆ ತೋಟ, ಬಾಳೇ ತೋಟ, ತರಕಾರಿ, ಹೂವು, ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂಬುದು ನಮ್ಮ ಆಶಯ. ಇಲ್ಲಿ ಮುಖ್ಯವಾಗಿ ಪೋಷಕರ ಸಹಕಾರ ಹಾಗೂ ಸಹಭಾಗಿತ್ವ ಅಭಿನಂದನೀಯ. – ರಮೇಶ್ಚಂದ್ರ. ಅಧ್ಯಕ್ಷರು, ವಿವೇಕಾನಂದ ಕನ್ನಡ ಶಾಲೆ.
ಪರಿಸರ ಸಂರಕ್ಷಣೆ- ಹಸಿರು ಪರಿಸರದ ಅಗತ್ಯತೆ
ಶ್ರಮಜೀವನದ ಪಾಠವನ್ನು ತರಗತಿ ಕೋಣೆಯ ಒಳಗೆ ಕಲಿಸುವುದು ಅನುಭವ ಜನ್ಯ ಕಲಿಕೆ ಆಗದು. ಪ್ರಾಯೋಗಿಕವಾಗಿ ಇಂತಹ ಕಲಿಕೆ ನಡೆದಾಗ ಬದುಕು ಗಟ್ಟಿಯಾಗುತ್ತದೆ. ಈ ದಿಶೆಯಿಂದ ಶಾಲಾ ‘ವೃತಿಕಾ’ ವಿಜ್ಞಾನ ಸಂಘದ ವತಿಯಿಂದ ಹಸಿರು ಪರಿಸರ ಶಾಲೆ ಯೋಜನೆ ಹಮ್ಮಿಕೊಂಡಿದ್ದೇವೆ. ಶಾಲಾ ಆಡಳಿತ ಮಂಡಳಿ, ಪೋಷಕರು, ಮುಖ್ಯವಾಗಿ ಮಕ್ಕಳು ಹಾಗೂ ನಾವೆಲ್ಲ ಜೊತೆ ಸೇರಿ ಈ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದೇವೆ. ನಮಗೆಲ್ಲಾ ಈ ಬಗ್ಗೆ ಖುಷಿ ಹಾಗೂ ಹೆಮ್ಮೆ ಇದೆ. – ಶಾಲಾ ಶಿಕ್ಷಕ ವೃಂದ
ವಿವೇಕಾನಂದ ಕನ್ನಡ ಶಾಲೆ
ಪ್ರತಿ ಪರೀಕ್ಷಾ ನಂತರದ ವಿಭಾಗಶಹ ಪೋಷಕರ ಸಭೆ ಕರೆದು ಆಯಾಯ ತರಗತಿಗಳಲ್ಲಿ ಪೋಷಕರೊಂದಿಗೆ ತರಗತಿ ಅಧ್ಯಾಪಕರು ಸಂವಾದ ನಡೆಸುವುದು ಶಾಲಾ ಶೈಕ್ಷಣಿಕ ಯೋಜನೆಗಳಲ್ಲಿ ಒಂದು. ತತ್ಸಮಯ ಮಕ್ಕಳೂ ನಮ್ಮ ಜೊತೆ ಇರುತ್ತಾರೆ.
ಅವರ ಪಠ್ಯ-ಸಹ ಪಠ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಾ ಉತ್ತರ ಪತ್ರಿಕೆಗಳು ಹಾಗೂ ಪ್ರಗತಿ ಪತ್ರದ ಅವಲೋಕನ ಮಾಡಲೂ ಅವಕಾಶ ಇರುತ್ತದೆ. ಈ ಸಂದರ್ಭಗಳಲ್ಲಿ ಒಂದಲ್ಲ ಒಂದು ವಿಶೇಷ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಿ ಪ್ರದರ್ಶಿಸುವುದು ಶಾಲಾ ವಿಶೇಷ. ಅದರಲ್ಲೂ ಈ ಎಲ್ಲಾ ಆಯೋಜನೆಗಳ ರೂವಾರಿಗಳು ಮಕ್ಕಳೇ ಆಗಿರುತ್ತಾರೆ ಅನ್ನುವುದು ನಿಜಕ್ಕೂ ಮೆಚ್ಚುವಂತಹ ವಿಷಯ.
ಉದಾಹರಣೆಗೆ ಕಲಿಕಾ ಸಾಮಗ್ರಿಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ದೈನಂದಿನ ಅಭ್ಯಾಸಗಳ ಸಾಂಸ್ಕೃತಿಕ ರೂಪಕ, ಪರಿಣಾಮಕಾರಿ ಪೋಷಕತ್ವ, ಇತ್ಯಾದಿ. ಈ ಬಾರಿ ಅಂತೂ ಹಸಿರು ಶಾಲಾ ಯೋಜನೆಗೆ ಶಾಲೆ ವೇದಿಕೆ ಆದದ್ದು ತುಂಬಾ ಖುಷಿ ನೀಡಿತು.
ಶಾಲಾ ಆವರಣದ ಪ್ರವೇಶಿಸುತ್ತಿದ್ದಂತೆ ಪರಿಸರಕ್ಕೆ ಸಂಬಂಧಿಸಿದ ಭಿತ್ತಿ ಪತ್ರ, ಬರಹಗಳು., ತರಕಾರಿ, ಹಣ್ಣು, ಹೂವುಗಳ ಗಿಡಗಳು,
ನೋಡುವ ಕುತೂಹಲ ನೋಡುತ್ತಾ ಹೋದಂತೆ ಹಸಿರು ಶಾಲಾ ಯೋಜನೆಯ ಭಾಗವಾಗಿ ಈ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಯಿತು. ಹೌದು ಶೈಕ್ಷಣಿಕ ವರ್ಷಾರಂಭದಲ್ಲಿ ಹಸಿರು ಶಾಲಾ ಯೋಜನೆಗೆ ಶಾಲಾ ವತಿಯಿಂದ ಸಹಕಾರ ಕೋರಲಾಗಿತ್ತು.
ಪೋಷಕರು ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ಶಾಲೆಗೆ ಒಂದು ಗಿಡ ನೀಡಿ ಸಹಕರಿಸುವಂತೆ ಪೋಷಕರ ಸಭೆಯಲ್ಲಿ ಮನವಿ ಮಾಡಿದ್ದರು.
ಇಂದು ಶಾಲಾ ಶಿಕ್ಷಕರು ಹಾಗೂ ಮಕ್ಕಳ ಶ್ರಮದಿಂದ ಶಾಲೆಯಲ್ಲಿ ತರಕಾರಿ ಬೆಳೆಸುವ ಹಣ್ಣು, ಹೂವಿನ ಗಿಡಗಳನ್ನು ಮಕ್ಕಳು ಹಾಗೂ ಶಿಕ್ಷಕರು ಬೆಳೆಸಿ ಪ್ರದರ್ಶನ ಹಾಗೂ ಮಾರಾಟ ಮಾಡಿದ ಬಗೆ ನೋಡಿ ನಿಜಕ್ಕೂ ಆಶ್ಚರ್ಯ ಎನಿಸಿತು. ಹಸಿರು ಶಾಲಾ ಯೋಜನೆಯಿಂದ ಮನೆಯೂ ಹಸಿರಾಗಿ ಬೆಳೆಯಲು ಸಂದೇಶ ನೀಡುತ್ತಿರುವ ಶಾಲಾ ಶ್ರಮಕ್ಕೆ ನಿಜಕ್ಕೂ ಅಭಿನಂದನೆ ಹೇಳಲೇ ಬೇಕು – ಶ್ರೀಮತಿ ಶಮಾ ಸಂತೋಷ್ -ಶಾಲಾ ಪೋಷಕರು.