‘ಸಾನಿಧ್ಯ’  : ಮನೆ – ಮನ ಭೇಟಿಗೊಂದು ವೇದಿಕೆಗೆ ಚಾಲನೆ

“ಸಮಯವಿದ್ದಾಗ ಆಪ್ತರನ್ನು ಕಾಣಲು ಮಾತನಾಡಿಸಲು ಹೋಗುವ ಜನರ ಬಗೆಯೊಂದಾದರೆ, ಸಮಯ ಹೊಂದಿಸಿಕೊಂಡು ಸಹಸಂಬಂಧ ಗಟ್ಟಿಗೊಳಿಸುವವರು ಒಂದಷ್ಟು ಮಂದಿ.

ನಮ್ಮ ಶಾಲೆಯಿಂದ ಮಕ್ಕಳ ಭೇಟಿ ಈ ಉದ್ದೇಶದಿಂದ ನಡೆಯಬೇಕಿದೆ. ಶಾಲೆ ಸಮಾಜದ ಬಹುಮುಖ್ಯ ಅಂಗ. ನಮ್ಮಿ ಶಾಲೆಯಲ್ಲಿ ಕಲಿತು ತೆರಳುವ ಮಕ್ಕಳು ಇಲ್ಲಿನ ಕಾರ್ಯಚಟುವಟಿಕೆಗಳ ಪ್ರತಿಬಿಂಬದಂತೆ. ವಿದ್ಯಾರ್ಥಿಯ ಜೀವನದಲ್ಲಿ ಪೋಷಕರೂ, ಶಿಕ್ಷಕರೂ, ಸಮಾಜವೂ ಪ್ರಮುಖ ಪಾತ್ರವಹಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳನ್ನು ಗಮನಿಸುತ್ತಾ, ಅವರ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಈ ದಿಶೆಯಿಂದ ಇಂದಿನ ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆಯಲ್ಲಿ ಶಿಕ್ಷಕರು- ಪೋಷಕರು -ಆಡಳಿತ ಮಂಡಳಿ ಸದಸ್ಯರು ಒಂದು ತ್ರಿಕೋನದಂತೆ ಕಾರ್ಯನಿರ್ವಹಿಸಬೇಕಾಗಿದೆ. ಇಂತೀ ಸದುದ್ದೇಶದಿಂದ ‘ಸಾನಿಧ್ಯ’ ಮನೆ-ಮನ ಭೇಟಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷವೂ ಮುಂದುವರಿಸುತ್ತಿದ್ದೇವೆ. ಹಲವಾರು ಕಾರ್ಯಭಾರಗಳ ನಡುವೆ ಸಮಯ ಹೊಂದಿಸಿಕೊಂಡು ಈ ಕಾರ್ಯಕ್ಕೆ ತೆರಳುತ್ತಿರುವ ಶಿಕ್ಷಕರು ನಿಜಕ್ಕೂ ಶ್ಲಾಘನಾರ್ಹರು” ಹೀಗೆಂದವರು ವಿವೇಕಾನಂದ ಕನ್ನಡ ಶಾಲೆಯ ಆಡಳಿತ ಸಮಿತಿಯ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿನಿಧಿಯಾಗಿರುವ ಶ್ರೀ ವಸಂತಮಾಧವ ಇವರು.

ಮಕ್ಕಳ ಕಲಿಕಾ ಸಾಧ್ಯತೆಗಳು, ಸಮಯ ಹೊಂದಾಣಿಕೆ, ಆಹಾರ – ಆರೋಗ್ಯ, ಮನೆಯ ಆರೋಗ್ಯಕರ ವಾತಾವರಣದ ಹಿನ್ನೆಲೆಯಿಂದ ಮನೆ ಭೇಟಿಯನ್ನು ಹಮ್ಮಿಕೊಳ್ಳಲಿರುವ ಬಗ್ಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಯಿತು. ತುಂಬಾ ದೂರದಿಂದ ವಾಹನ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲಿ ಬರುವ ಮಕ್ಕಳು, ತೀರಾ ಬಡತನದ ಕೌಟುಂಬಿಕ ಹಿನ್ನೆಲೆಯಿಂದ ಬರುತ್ತಿರುವ ಮಕ್ಕಳ ಮನೆಯ ಪರಿಸ್ಥಿತಿಗಳನ್ನು ಅವಲೋಕನ ಸಭೆಯಲ್ಲಿ ಚರ್ಚಿಸಲಾಯಿತು. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಕೇವಲ ಪಠ್ಯ ವಿಷಯಗಳ ಬೋಧನೆ ಅಥವಾ ತರಗತಿ ಕೋಣೆಗೆ ಸೀಮಿತವಾಗದೆ ವ್ಯಕ್ತಿ- ವ್ಯಕ್ತಿಗಳ ನಡುವಿನ ಸಂಬಂಧ, ಎದುರಿಸುತ್ತಿರುವ ಸನ್ನಿವೇಶ- ಸಂದರ್ಭಗಳ ಸಮೂಹ ಪರಿಣಾಮವಾಗಿದೆ.

ನಮ್ಮ ಯೋಚನೆ – ವರ್ತನೆಗಳ ಅಭಿವ್ಯಕ್ತಿಗೆ ಈ ಎಲ್ಲಾ ಅಂಶಗಳು ಕಾರಣವಾಗಿರುವ ಬಗ್ಗೆ ಸಭೆಯಲ್ಲಿ ಸಂವಾದ ನಡೆಯಿತು.

ಅನಂತರ ಗುಂಪುಶಃ ಮನೆ ಭೇಟಿಗೆ ತೆರಳಿದ ಶಿಕ್ಷಕ ತಂಡ ಪೋಷಕರ ಆತ್ಮೀಯ ಆತಿಥ್ಯ ಹಾಗೂ ಮಾತುಕತೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

Highslide for Wordpress Plugin