ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ವಿದ್ಯಾಸಂಸ್ಥೆಗಳ ಹೆಗ್ಗುರುತು ಇಲ್ಲಿ ನೀಡುವ ಗುಣಾತ್ಮಕ ಶಿಕ್ಷಣವಾಗಬೇಕು. ಈ ದಿಶೆಯಲ್ಲಿ ಸೇವಾ ಮನೋಭಾವದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ನುರಿತರಾದ ಸಾಮಾಜಿಕವಾಗಿ ಗುರುತಿಸಲ್ಪಡುತ್ತಿರುವ ವ್ಯಕ್ತಿಗಳು ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ನಿತ್ಯ-ನಿರಂತರ ಶ್ರಮ ಹಾಗೂ ಪೋಷಕರ ಸಹಕಾರದೊಂದಿಗೆ ನಮ್ಮೀ ಶೈಕ್ಷಣಿಕಗುರಿ ಸಾಫಲ್ಯ ಹೊಂದಬೇಕು ಎಂದು ಡಾ. ಕೃಷ್ಣ ಭಟ್ಕೊಂಕೋಡಿ ಹೇಳಿದರು.


ವಿವೇಕಾನಂದ ಕನ್ನಡ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ನೂತನ ಆಡಳಿತ ಮಂಡಳಿ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಶ್ರೀಯುತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾವರ್ಧಕ ಸಂಘದ ಪ್ರತಿನಿಧಿಯಾಗಿ ಆಗಮಿಸಿದ ಡಾ. ಕೃಷ್ಣ ಭಟ್ ಕೊಂಕೋಡಿಯವರು ಪ್ರಸ್ತಾವನೆಯೊಂದಿಗೆ ನೂತನ ಸಮಿತಿಯ ಪದಾಧಿಕಾರಿಗಳನ್ನು ಸ್ವಾಗತಿಸಿದರು. ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರಕ್ಕೆ ಚಾಲನೆ ನೀಡಲಾಯಿತು. ಹಿರಿಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಶೇಖರ ನಾರಾವಿ ಇವರು ಎಲ್ಲಾ ಸದಸ್ಯರಿಗೆ ದೀಪಪ್ರದಾನ ಮಾಡಿದ ಅನಂತರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ನೂತನ ಸಂಚಲಕರಾದ ಶ್ರೀಯುತ ವಸಂತ ಸುವರ್ಣ ಅವರು ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಹಣಾ ಅಗತ್ಯತೆಗಳನ್ನು ಸಭೆಯ ಮುಂದಿರಿಸಿದರು. ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರ ಇವರು ಅಧ್ಯಕ್ಷೀಯ ನೆಲೆಯಲ್ಲಿ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವ ನಿರ್ಣಯದ ಸಾರ್ಥಕ್ಯಕ್ಕೆ ಮಹತ್ತರ ಕೊಡುಗೆ ನೀಡುತ್ತದೆ ಎಂದು ಹೇಳಿದರು. ಉಳಿದಂತೆ ಕೋಶಾಧಿಕಾರಿಯಾಗಿ ಶ್ರೀ ಅಶೋಕ್ ಕುಂಬ್ಲೆ, ಸದಸ್ಯರಾಗಿ ಡಾ. ಆಶಾ, ಶ್ರೀ ಈಶ್ವರ ನಾಯ್ಕ ಎಸ್, ಶ್ರೀ ರಘುನಾಥ್ ಬಿ, ತಿರುಮಲೇಶ್ವರ ಭಟ್, ವೀಣಾ ನಾಗೇಶ್ ತಂತ್ರಿ, ಸುಬ್ರಹ್ಮಣ್ಯ ಭಟ್ ಬಿ. ಆಯ್ಕೆಯಾದರು.