’ಯೋಗ’ ಅಂದರೆ ಜೋಡಣೆ, ಸಮ್ಯೋಗ, ಸಹಬಂಧ ಎಂಬೆಲ್ಲಾ ಅರ್ಥ ನೀಡುವ ಶಬ್ಧ ಮಾತ್ರವಲ್ಲ. ಈ ಶಬ್ದಾರ್ಥದೊಂದಿಗೆ ಭಾರತೀಯರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಭಾವನೆಗಳು ಬೆಸೆದುಕೊಂಡಿದೆ. ಯೋಗ- ಕೇವಲ ವ್ಯಾಯಾಮ, ಪ್ರಾಣಾಯಾಮ ಅನ್ನುವ ಪರಿಕಲ್ಪನೆಗೆ ಸೀಮಿತವಾಗಿಲ್ಲ. ಭಾರತೀಯರ ಭಾವನೆಗಳೊಂದಿಗೆ ಯೋಗ ಬೆರೆತು ಹೋಗಿದೆ. ಬೌದ್ಧಿಕ, ಮಾನಸಿಕ, ಶಾರೀರಕ, ತನ್ಮೂಲಕ ಸಾಮಾಜಿಕ ಅಧ್ಯಾತ್ಮಿಕ ಬೆಳವಣಿಗೆಗೆ ಯೋಗದ ಮಹತ್ತರ ಯೋಗದಾನವಿದೆ. ಯೋಗ – ಬದುಕುವ ವಿಧಾನವಾಗಿದೆ.

ಭಾರತೀಯ ಬದುಕಿನ ಪರಿಚಯ ಪ್ರಾಚೀನ ಕಾಲದಿಂದಲೂ ವಿಶ್ವಕ್ಕೇ ಮಾದರಿಯಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಭಾರತೀಯರ ಮೈಮರೆವಿನಿಂದಾಗಿ ನಮ್ಮೀ ಸನಾತನ ಸಂಸ್ಕೃತಿಯ ಬೇರುಗಳು ಒಂದೊಂದಾಗಿ ಕಳಚುವಂತಾಗಿದೆ. ಇದರಿಂದ ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲು ಭಾರತೀಯ ಆಧ್ಯಾತ್ಮಿಕ ಚೇತನಗಳು ಸತತ ಪ್ರಯತ್ನ ನಡೆಸುತ್ತಲೇ ಬರುತ್ತಿದ್ದಾರೆ. ಆದರಣೀಯ ಪ್ರಧಾನ ಮಂತ್ರಿಯವರು ನಮ್ಮ ದೇಶದ ಯೋಗ ಸಂಪತ್ತಿಗೆ ವಿಶ್ವಮಾನ್ಯತೆಯನ್ನು ತಂದ ದಿನವೇ ಜೂನ್ 21.
ಭಾರತ ಮಾತ್ರವಲ್ಲದೆ ವಿಶ್ವದ ಇನ್ನಿತರ ದೇಶಗಳೂ ಯೋಗಾಭ್ಯಾಸಗಳನ್ನು ಅಭ್ಯಸಿಸುತ್ತಿರುವುದು ಶ್ಲಾಘನೀಯ ಈ ನಿಟ್ಟಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ತೆಂಕಿಲ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ಸಪ್ತಾಹ ಕಾರ್ಯಕ್ರಮ ನಡೆಯಿತು. ಜೂನ್ 15 ರಿಂದ 21 ರ ವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಆಸನ, ವ್ಯಾಯಾಮ, ಪ್ರಾಣಾಯಾಮಗಳ ಪ್ರಾತ್ಯಕ್ಷಿಕೆ ನೀಡಲಾಯಿತು. ಜೂನ್ 21 ರಂದು ಆನ್ ಲೈನ್ ಮುಖಾಂತರ’ ಯೋಗ ದಿನಾಚರಣೆ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 1 ರಿಂದ 10 ನೇ ತರಗತಿವರೆಗೆ ವಿಭಾಗವಾರು ನಡೆದ ಕಾರ್ಯಕ್ರಮ ದೀಪ ಪ್ರಜ್ವಲನೆ, ಪ್ರಾರ್ಥನೆ, ಯೋಗ ಮಂತ್ರದೊಂದಿಗೆ ಆರಂಭಗೊಂಡಿತು. ಆಯಾ ವಿಭಾಗದಿಂದ ಆಯ್ಕೆಮಾಡಿದ ಪೋಷಕರು ಯೋಗ ದಿನಾಚರಣೆಯ ಪ್ರಸ್ತುತತೆ ಮಹತ್ವ, ಯೋಗ-ಜೀವನ ಪದ್ಧತಿ ಎಂಬೀ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಅನಂತರ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ ನಡೆಯಿತು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.









