ಜೀವ-ಜೀವನ ನೀಡುವವಳು ಮಾತೆ. ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರೇ ತಾಯಿ. ತಾಯಿ ಆಕೆ ಒಂದು ಶ್ರೇಷ್ಠ ಹಾಗೂ ಪ್ರೇರಣಾಶಕ್ತಿ ಎಂದು ವಿದ್ಯಾಭಾರತಿ ಕರ್ನಾಟಕ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಮಾತೃಭಾರತಿ ಜಿಲ್ಲಾ ಸಮಾವೇಶದಲ್ಲಿ ಉದ್ಘಾಟನಾ ಸಮಾರಂಭದ ದಿಕ್ಸೂಚಿ ಮಾತುಗಳಲ್ಲಿ ಮೈತ್ರೇಯಿ ಗುರುಕುಲದ ಸಾವಿತ್ರಿ ಮಾತಾಜಿ ತಿಳಿಸಿದರು.







ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ|ಕಮಲ ಪ್ರಭಾಕರ ಭಟ್, ಇವರು ಸ್ತ್ರೀಶಕ್ತಿಯ ಕುರಿತಾದ ಹಲವು ಪ್ರೇರಣೆ ನೀಡುವ ಕಥೆಗಳನ್ನು ಹೇಳಿ ಎಲ್ಲರೊಂದಿಗೆ ಪ್ರೀತಿ, ಗೌರವದಿಂದ ವರ್ತಿಸಬೇಕು ಎಂದು ತಿಳಿಸಿದರು. ದೀಪ ಪ್ರಜ್ವಲನೆ ಮಾಡಿ ಅತಿಥಿ ನೆಲೆಯಲ್ಲಿ ಮಾತನಾಡಿದ ಶ್ರೀಮತಿ ಅಶ್ವಿನಿ ವಾರಣಾಸಿಯವರು ’ಮಾತೃದೇವೋ ಭವ’ ಎಂಬುದು ಶ್ರೇಷ್ಠ ಹೇಗೆ ಎಂಬುವುದನ್ನು ವಿವರಿಸಿದರು.
ವೇದಿಕೆಯಲ್ಲಿ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿಗಳಾದ ಶ್ರೀ ವಸಂತ ಮಾಧವ, ವಿದ್ಯಾಭಾರತಿ ಪ್ರಾಂತದ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಪ್ರಮುಖರಾದ ಶ್ರೀ ವೆಂಕಟರಮಣ ರಾವ್ ಮಂಕುಡೆ, ವಿದ್ಯಾ ಭಾರತಿ ಜಿಲ್ಲಾ ಕಾರ್ಯದರ್ಶಿ ಶ್ರೀ ಲೋಕಯ್ಯ ಡಿ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರದ ಅವಧಿಯಲ್ಲಿ ಎಲ್ಲಾ ಶಾಲೆಗಳ ಮಾತೃಮಂಡಳಿಯ ವಾರ್ಷಿಕ ಯೋಜನೆಗಳ ವರದಿಯನ್ನು ಗಂಗಾ ಮಾತಾಜಿಯವರ ಅಧ್ಯಕ್ಷತೆಯಲ್ಲಿ ಮಂಡಿಸಲಾಯಿತು. ಮಧ್ಯಾಹ್ನ ಮಾತೆಯರಿಗೆ ಮಾತೃ ಭೋಜನ ನಡೆಯಿತು.