10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಇದೀಗ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಂತಹ ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದಂತಹ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕದ ಬಾವುಟ ನೀಡುವ ಮೂಲಕ ಉದ್ಘಾಟಿಸಲಾಯಿತು.






ಸಂಗೀತ ಕ್ಷೇತ್ರದಲ್ಲಿರುವ ಶ್ರೀಮತಿ ಶ್ರೇಯಾ ಕೊಳತ್ತಾಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವ ಅನೀಶ್ ಬಡೆಕ್ಕಿಲ, ಉಪನ್ಯಾಸಕಿಯಾಗಿರುವ ಶ್ರೀಮತಿ ಚೈತ್ರಾ, ಯೋಗ ತರಗತಿಗಳನ್ನು ನಡೆಸುತ್ತಾ ಸ್ವಉದ್ಯೋಗ ಕ್ಷೇತ್ರದಲ್ಲಿರುವ ಶ್ರೀಮತಿ ಮಾನಸ, ಕೃಷಿಕ್ಷೇತ್ರದಲ್ಲಿರುವ ಶ್ರೀಮತಿ ಪ್ರಾರ್ಥನಾ, ಕ್ರೀಡಾಕ್ಷೇತ್ರದಲ್ಲಿರುವ ಕಾರ್ತಿಕ್, ವಕೀಲ ವೃತ್ತಿಯಲ್ಲಿರುವ ವಿರೂಪಾಕ್ಷ, ಸಹಕಾರಿ ಕ್ಷೇತ್ರದಲ್ಲಿರುವ ಅಶ್ವಥ್ ಇವರು ಶಾಲಾ ದಿನಗಳನ್ನು ಮೆಲುಕು ಹಾಕುತ್ತಾ, ಕನ್ನಡ ಭಾಷಾ ಪ್ರೇಮದೊಂದಿಗೆ ಸಂಸ್ಕೃತಿಯನ್ನು ಮೈಗೂಡಿಸುತ್ತಾ ವಿದ್ಯಾರ್ಥಿ ದೆಸೆಯಲ್ಲಿ ಬೆಳೆಸಿಕೊಳ್ಳಬೇಕಾದ ವ್ಯಕ್ತಿತ್ವ ವಿಕಸನದ ಪೂರಕ ಅಂಶಗಳನ್ನು ಹೇಳಿದರು.
ಪ್ರಸ್ತುತ ಸಮಯದಲ್ಲಿ ಶಾಲಾ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಇವರ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಹಣತೆ ಬೆಳಗಿಸುತ್ತಾ ಕನ್ನಡ ನಾಡ ಬಾವುಟವನ್ನು ನೀಡಿ ಆಚರಿಸಲಾಯಿತು. ಕನ್ನಡ ನಾಡು-ನುಡಿ- ಸಂಸ್ಕೃತಿಯ ವೈಶಿಷ್ಟ್ಯತೆ ಸಾರುವ ನೃತ್ಯ, ಭಾಷಣ, ಹಾಡುಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ಸ್ಪರ್ಧೆಗಳ ಬಹುಮಾನ ನೀಡಲಾಯಿತು. ಶಾಲಾ ಸಂಚಾಲಕರಾದ ಶ್ರೀಯುತ ರವಿನಾರಾಯಣ ಇವರು ಸಭಾಧ್ಯಕ್ಷತೆಯ ನೆಲೆಯಲ್ಲಿ ಶುಭ ಹಾರೈಸಿದರು.
ಆಡಳಿತ ಮಂಡಳಿ ಸದಸ್ಯರಾದ ಶೇಖರ ನಾರಾವಿ, ರಮೇಶ್ಚಂದ್ರ, ವಸಂತ ಸುವರ್ಣ, ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ದಾಮೋದರ್ ಪಾಟಾಳಿ ಉಪಸ್ಥಿತರಿದ್ದು ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮವನ್ನು ಸಾಂಗವಾಗಿ ನಡೆಸಿಕೊಟ್ಟರು.