ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರದ ಉದ್ಘಾಟನೆಯನ್ನು ಶಾಲೆಯ ಸಂಚಾಲಕರಾದ ಶ್ರೀ ರವಿ ನಾರಾಯಣರವರು ನೆರವೇರಿಸಿ ಶಿಕ್ಷಕರು ನಿರಂತರವಾಗಿ ಹೊಸದಾದ ವಿಚಾರಗಳಿಗೆ ತೊಡಗಿಸಿಕೊಳ್ಳಬೇಕು ಎಂದರು. ನಂತರ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರು ಶಿಕ್ಷಕರಿಗಾಗಿ ‘ಸಾಂಸ್ಕೃತಿಕ ಪರಿಕಲ್ಪನೆಯ ಬೋಧನಾ ವಿಧಾನ’ ಎಂಬ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶೃತಿ, ತಾಳ, ಹಸ್ತ, ದೈಹಿಕ ಚಲನೆ ಮತ್ತು ಭಾವಾಭಿನಯಗಳೊಂದಿಗೆ ಪಠ್ಯ ವಿಷಯವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತಲುಪಿಸಬಹುದಾದ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಿದರು.






ಎರಡನೇ ಅವಧಿಯಲ್ಲಿ ಶಿಕ್ಷಣದಲ್ಲಿ ಗಮಕ ಪ್ರಸ್ತುತಿ ಎಂಬ ವಿಷಯದ ಬಗ್ಗೆ ಪ್ರೊ. ವೇದವ್ಯಾಸರು ಮಾಹಿತಿ ನೀಡಿದರು. ಬಳಿಕ 10 ನೇ ತರಗತಿಯ ಪಠ್ಯದ ಗಮಕ ವಾಚನ ಕಾರ್ಯಕ್ರಮ ನೆರವೇರಿತು. ಶ್ರೀ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ವಾಚಕರಾಗಿ, ಶ್ರೀ ನಾರಾಯಣ ಭಟ್ ಕೆಯ್ಯೂರು ಪ್ರವಚನ ನೆರವೇರಿಸಿದರು. ಶಿಕ್ಷಕರು ಗಮಕವಾಚನ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಗಮಕ ಕಲಾಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯ ಉಪಸ್ಥಿತರಿದ್ದರು.
ಅಪರಾಹ್ನದ ನಂತರದ ಅವಧಿಯಲ್ಲಿ ಪ್ರೊ. ಸೂರ್ಯನಾರಾಯಣ ಭಟ್‌ರವರು ’ಶಿಕ್ಷಕನಲ್ಲಿರುವ ನಾಯಕತ್ವ ಗುಣ’ ಎಂಬ ವಿಷಯದ ಬಗ್ಗೆ ಚಟುವಟಿಕೆಯ ಮೂಲಕ ಉಪನ್ಯಾಸ ನೀಡಿದರು. ಸಮಾರೋಪ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ ನಾಯಕ್, ವರ್ತುಲ ಸಂಯೋಜಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಉಪಸ್ಥಿತರಿದ್ದರು.
ಶಿಕ್ಷಕರು ಪ್ರಾರ್ಥಿಸಿ, ಶ್ರೀಮತಿ ಶ್ವೇತಾ ಮಾತಾಜಿ ಸ್ವಾಗತಿಸಿ, ಶ್ರೀಮತಿ ವೀಣಾಕುಮಾರಿ ಮಾತಾಜಿ ಧನ್ಯವಾದಗೈದು, ಶ್ರೀಮತಿ ಸ್ವಾತಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.