ಯೋಗವು ಪುರಾತನ ಭಾರತದ ಅಮೂಲ್ಯ ಕೊಡುಗೆ. ಇದು ಮನಸ್ಸು, ಬುದ್ಧಿ ಮತ್ತು ಶರೀರದ ನಡುವೆ ಐಕ್ಯತೆ ಸಾಧಿಸುವ ಯೋಗ ವಿಜ್ಞಾನವು ನಾವು ನಮ್ಮೊಳಗೆ ಮತ್ತು ಪ್ರಕೃತಿಯೊಡನೆ ಒಂದಾಗಿ ಕಾಣುವುದಕ್ಕೆ ಸಹಕಾರಿಯಾಗಿದೆ. ಇದನ್ನರಿತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪಠ್ಯವಿಷಯದೊಂದಿಗೆ ಯೋಗಾಭ್ಯಾಸವನ್ನು ಜೋಡಿಸಿರುತ್ತೇವೆ ಎಂದು ನುಡಿದವರು ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ಜಯರಾಂ ಭಟ್ ಇವರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ನಡೆದ ಸಾಮೂಹಿಕ ಅಗ್ನಿಹೋತ್ರ, ಸೂರ್ಯನಮಸ್ಕಾರ, ಚಿಕಿತ್ಸಾತ್ಮಕ ಸರಳ ಆಸನಗಳು ಹಾಗೂ ಪ್ರಾಣಾಯಾಮ ಅಭ್ಯಾಸಗಳಲ್ಲಿ ಪೋಷಕರು, ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದರು.








ಅಗ್ನಿಹೋತ್ರದಲ್ಲಿ ಇವರೆಲ್ಲಾ ಅಗ್ನಿಗೆ ಅಗ್ನಿ ಮಂತ್ರದೊಂದಿಗೆ ಘೃತ ಮತ್ತು ಅಕ್ಷತೆ ಅರ್ಪಿಸಿದರು. ಅನಂತರ ನಡೆದ ಯೋಗಾಭ್ಯಾಸದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿನಿ ಉಜಿರೆಯಲ್ಲಿ ನ್ಯಾಚುರೋಪತಿಯಲ್ಲಿ ವೈದ್ಯಕೀಯ ಪದವಿ ಮಾಡುತ್ತಿರುವ ಕು. ಪ್ರಜ್ಞಾ ಅವರು ಓಂಕಾರ, ಶಿಥಿಲೀಕರಣ ವ್ಯಾಯಾಮ, ಸರಳ ವ್ಯಾಯಾಮ, ಪ್ರಾಣಾಯಾಮಗಳ ಮಹತ್ವವನ್ನು ಹೇಳುತ್ತಾ ಪ್ರಾತ್ಯಕ್ಷಿಕೆ ನೀಡಿದರು. ಆಗಮಿಸಿದ ಪೋಷಕರು, ಮಕ್ಕಳು ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಶಾಲೆಯ ಯೋಗ ಶಿಕ್ಷಕರಾದ ಶ್ರೀಮತಿ ವೀಣಾ ಸರಸ್ವತಿ, ಶ್ರೀಮತಿ ಹರಿಣಾಕ್ಷಿ, ಶ್ರೀಯುತ ರಂಗಪ್ಪ ಕಲಾದಗಿ ಮಾರ್ಗದರ್ಶನ ನೀಡಿದರು.
ಶಿಕ್ಷಕರು ಮತ್ತು ಮಕ್ಕಳಿಂದ ಕೆದಿಲ ಗ್ರಾಮದ ಭಜನಾ ಮಂದಿರಗಳಲ್ಲಿ ಯೋಗಾಭ್ಯಾಸ ನಡೆಸಲಾಯಿತು.