ದೀಪ ಪ್ರದಾನ ಕಾರ್ಯಕ್ರಮ
ಕನ್ನಡ ಮಾಧ್ಯಮದ ಕಲಿಕೆ ನನ್ನಲ್ಲಿ ವೈಯಕ್ತಿಕ ಮತ್ತು ಸಾಮಾಜಿಕ ಸೂಕ್ಷ್ಮತೆಯನ್ನು ಬೆಳೆಸಿದೆ. ಮಾಧ್ಯಮ ಯಾವುದೆನ್ನುವುದಕ್ಕಿಂತಲೂ ವಿದ್ಯಾರ್ಥಿಯ ಕಲಿಕಾಸಕ್ತಿ, ಪೋಷಕರ ಸಹಕಾರ-ಬೆಂಬಲ ಮಗುವಿನ ವ್ಯಕ್ತಿತ್ವ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಸಂದೀಪ್ ಇವರು ನುಡಿದರು. ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಸಾಲಿನ ಹತ್ತನೇ ತರಗತಿಯ ಮಕ್ಕಳ ದೀಪಪ್ರದಾನ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದರು. ಭಗವದ್ಗೀತಾ ಶ್ಲೋಕದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಾಲಾ ಹಿರಿಯ ಪೋಷಕ ದಂಪತಿಗಳಾದ ಶ್ರೀ ಎಲ್ ರಾಧಾಕೃಷ್ಣ ಭಟ್ ಹಾಗೂ ಶ್ರೀಮತಿ ಎಲ್. ಉಮಾಶಂಕರಿ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಅನಂತರ ಅಖಂಡ ಭಾರತದ ಸಂಕಲ್ಪದೊಂದಿಗೆ ಆಗಮಿಸಿದ ಪೋಷಕರು, ಮಕ್ಕಳು ಹಾಗೂ ಅಭ್ಯಾಗತರು ದೀಪ ಪ್ರಜ್ವಲಿಸಿದರು. ಅನಂತರ ಮಾತೃವಂದನಾ ಜರುಗಿತು. ಪ್ರಸ್ತುತ ಸಾಲಿನ 10ನೇ ತರಗತಿಯ ಮಕ್ಕಳು 9ನೇ ತರಗತಿಯ ಮಕ್ಕಳಿಗೆ ದೀಪ ಪ್ರದಾನಿಸಿ ಶಾಲಾ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳನ್ನು ಮುಂದುವರಿಸುವ ಆಶಯದೊಂದಿಗೆ ಶುಭ ಹಾರೈಸಿದರು. ಶಾಲಾ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಚಾಲಕರಾದ ವಸಂತ ಸುವರ್ಣ, ಕೋಶಾಧಿಕಾರಿ, ಅಶೋಕ ಕುಂಬ್ಳೆ ಸದಸ್ಯರಾದ ತಿರುಮಲೇಶ್ವರ ಭಟ್, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರೌಢ ವಿಭಾಗದ ಮುಖ್ಯಗುರುಗಳಾದ ಆಶಾ ಬೆಳ್ಳಾರೆ, ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಾಲಾಪೋಷಕರಾದ ಉಷಾ, ಮುರಳೀಧರ ನಾಯಕ್, ಮಂಜುನಾಥ ಇವರು ಅನಿಸಿಕೆ ವ್ಯಕ್ತಪಡಿಸಿದರು.