
ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಅಭಿದಾನವನ್ನು ಇಟ್ಟುಕೊಂಡಿರುವುದಲ್ಲದೇ ಅವರ ತತ್ವಾದರ್ಶಗಳನ್ನೂ ವಿವೇಕಾನಂದ ಶಿಕ್ಷಣ ಸಂಸ್ಥೆ ನಿರಂತರವಾಗಿ ಪಾಲಿಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷವೂ ವಿವೇಕಾನಂದ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದೆ. ಈ ಬಾರಿ ವಿಶೇಷವಾಗಿ ವಿವೇಕಾನಂದ ಜಯಂತಿಯ ಅಂಗವಾಗಿ ಜ.13ರಂದು ಬೆಳಗ್ಗೆ ‘ಶತ ಜಯ ಘೋಷ್’ ಎನ್ನುವ ಪರಿಕಲ್ಪನೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ಸುಮಾರು 1500 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಘೋಷ್ ವಾದನದೊಂದಿಗೆ ಸಂಚಲನ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಸಹಿತ ಹಲವಾರು ಮಂದಿ ಮಹಾಲಿಂಗೇಶ್ವರ ದೇವಳದ ರಥಬೀದಿಯಲ್ಲಿ ಜಯಘೋಷ್ ಸಮಾವೇಶದಲ್ಲಿ ಪಾಲ್ಗೊಂಡರು. ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು ರಸ್ತೆ ಬದಿಯಲ್ಲಿ ಪಥ ಸಂಚಲನಕ್ಕೆ ಪುಷ್ಪಾರ್ಚನೆ ಮಾಡಿದರು.