ಸಾಧನಾಭಿವಂದನಾ

 

2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಕನ್ನಡ ಮಾಧ್ಯಮದಲ್ಲಿ ರಾಜ್ಯದಲ್ಲಿ 3ನೇ ಸ್ಥಾನ ಪಡೆಯುದರೊಂದಿಗೆ ಗುಣಾತ್ಮಕ ಫಲಿತಾಂಶ ತಂದುಕೊಟ್ಟ ಹತ್ತನೇ ತರಗತಿ ಮಕ್ಕಳಿಗೆ ‘ಸಾಧನಾಭಿವಂದನಾ’ ಸಂಭ್ರಮ ನಡೆಯಿತು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ವೆಂಕಟರಮಣ ರಾವ್ ಅವರು ‘ಕನ್ನಡ ಭಾಷೆ ನಮ್ಮ ಹೃದಯದ ಭಾಷೆ, ಭಾವನೆಗಳ ವ್ಯಕ್ತೀಕರಣದ ಭಾಷೆ ಖಂಡಿತವಾಗಿಯೂ ಕನ್ನಡ ಮಾಧ್ಯಮದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಶಾಲಾ ಕೀರ್ತಿಯನ್ನು ಬೆಳಗಿ ಇದೀಗ ಉತ್ತಮ ಫಲಿತಾಂಶ ತಂದುಕೊಟ್ಟ ಮಕ್ಕಳ ಸಾಧನೆಗಳನ್ನು ಶ್ಲಾಘಿಸುತ್ತಾ  ಪೋಷಕರು ತನು-ಮನ –ಧನಗಳ ಸಹಕಾರವನ್ನು ಸ್ಮರಿಸುತ್ತಾ ಎಲ್ಲರಿಗೂ ಅಭಿನಂದನೆ ಹಾಗೂ ಅಭಿವಂದನೆ ಸಲ್ಲಿಸಿ ಕಲಿಕೆ ಮಗುವಿನಲ್ಲಿ ಭಾಷಾ ಗಟ್ಟಿತನದೊಂದಿಗೆ ಬೌದ್ಧಿಕ, ಮಾನಸಿಕ, ಸಾಮಾಜಿಕ ವಿಕಾಸಗಳಿಗೆ ಪೂರಕವಾಗಿರುತ್ತದೆ. ಈ ಶ್ರೇಷ್ಠತೆಯ ಭಾವ ನಮ್ಮಲ್ಲಿರಬೇಕಾದುದು ಅತೀ ಅಗತ್ಯ ಎಂದು ತಿಳಿಸುತ್ತಾ ಉತ್ತಮ ಫಲಿತಾಂಶ ತಂದುಕೊಟ್ಟ ಮಕ್ಕಳಿಗೆ ಪ್ರ‍ೋತ್ಸಾಹ, ಮಾರ್ಗದರ್ಶಕರಾದ ಪೋಷಕರನ್ನು ಅಭಿನಂದಿಸಿದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಕೆನರಾ ಬ್ಯಾಂಕಿನ ಪುತ್ತೂರು ಶಾಖೆಯ ಹಿರಿಯ ಪ್ರಬಂಧಕರಾದ ಶ್ರೀ ಎಂ ಸುರೇಶ್ ದೀಪ ಪ್ರಜ್ವಲಿಸಿ ಪುತ್ತೂರಿನಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತ ಸಂದರ್ಭವನ್ನು ನೆನಪಿಸಿ ಕಲಿಕೆಯನ್ನು ಮುಂದುವರಿಸಲು ಇಂದೀಗ ಆರ್ಥಿಕ ಮುಗ್ಗಟ್ಟು ತೊಡಕಾಗುವುದಿಲ್ಲ. ಯಾಕೆಂದರೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳು ಮಕ್ಕಳಲ್ಲಿ ಮತ್ತು ಪೋಷಕರಲ್ಲಿರುವ ಇಚ್ಛಾಶಕ್ತಿಯನ್ನು ಫೋಷಿಸುವ ಕಾರ್ಯ ಮಾಡುತ್ತಿದೆ. ಹಾಗಾಗಿ ಉನ್ನತ ಮಟ್ಟದ ಕಲಿಕೆಯ ಧ್ಯೇಯವನ್ನಿರಿಸಿ ಮುಂದುವರಿಯಿರಿ. ಕದಿಯಲಾರದ ವಿದ್ಯೆ ಎಂಬ ಸಂಪತ್ತು ಶ್ರೇಯಸ್ಸನ್ನು ತರಲಿ ಎಂದು ಶುಭ ಹಾರೈಸಿದರು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ನಮ್ಮೀ ನೆಲದ ಬಗ್ಗೆ ಪ್ರೀತಿ, ಆದರ, ಗೌರವವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯತೆಯನ್ನು ತಿಳಿಸುತ್ತಾ ಮುಂದಿನ ಹಾದಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಸಂತ ಸುವರ್ಣ, ಕೋಶಾಧಿಕಾರಿಗಳಾದ ಅಶೋಕ್ ಕುಂಬ್ಳೆ ಉಪಸ್ಥಿತರಿದ್ದರು. ರಾಜ್ಯದಲ್ಲಿ 3ನೇ ಸ್ಥಾನ ಪಡೆದು, ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಪ್ರಜ್ಞಾ ನಿಡ್ವಣ್ಣಾಯ ಮತ್ತು ಆಕೆಯ ಪೋಷಕರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಆಕೆಯ ಪೋಷಕರು ಮಾತನಾಡಿ ಇಂಜಿನಿಯರಿಂಗ್ ಪದವೀಧರರಾದ ನಾವು ಯಾವುದೇ ಗೊಂದಲಗಳಿಲ್ಲದೆ ಆಯ್ಕೆ ಮಾಡಿದ ಮಾಧ್ಯಮ ಕನ್ನಡ. ಅಂಕಗಳಿಗಾಗಿ ಕಲಿಕೆ ನಡೆಯದೆ ಅರಿವಿನ ವಿಕಾಸಕ್ಕಾಗಿ ಕಲಿಕೆ ನಡೆಯಬೇಕು. ಅದಕ್ಕೆ ಈ ಶಾಲೆ ಮತ್ತು ಇಲ್ಲಿನ ಮಾತಾಜಿ ವೃಂದದವರು ಮಕ್ಕಳ ಆಸಕ್ತಿ, ಹವ್ಯಾಸಗಳನ್ನು ಫೋಷಿಸಿ ಬೆಳೆಸಿದ್ದಾರೆ ಮುಂದೆಯೂ ಶಾಲೆಯು ಉತ್ತರೋತ್ತರ ಅಭಿವೃದ್ಧಿ ಕಾಣುವಂತಾಗಬೇಕು ಎಂದು ಕೃತಜ್ಞತೆಯನ್ನರ್ಪಿಸಿದರು.

ಪ್ರೌಢ ವಿಭಾಗದ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಸ್ವಾಗತ ಪ್ರಾಸ್ತಾವಿಕ ಮಾತುಗಳೊಂದಿಗೆ ಮಕ್ಕಳು ಕ್ರೀಡೆ, ಸಾಂಸ್ಕೃತಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಕ್ಕ್ರಿಯರಾಗಿದ್ದುದರ ಬಗ್ಗೆ ತಿಳಿಸಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆ ಬರೆದ 118 ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಲಾಯಿತು. ಶಾಲಾ ಸಹಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿ, ಚಂದ್ರಶೇಖರ್ ಅವರು ವಂದಿಸಿದರು.

Highslide for Wordpress Plugin