
“ರಕ್ಷಾ ಬಂಧನವು ಮಕ್ಕಳಲ್ಲಿ ಸಹೋದರತ್ವ, ಪ್ರೀತಿ, ವಿಶ್ವಾಸ ಸಂಬಂಧಗಳ ಮಹತ್ವವನ್ನು ಮೂಡಿಸಲು ಸಹಕಾರಿಯಾಗಿದೆ. ಬಾಲ್ಯದಿಂದಲೇ ಈ ಬಗೆಯ ಆಚರಣೆಗಳ ಮಹತ್ವವನ್ನು ತಿಳಿಯುತ್ತಾ ಬೆಳೆದ ನಾವು ಕೌಟುಂಬಿಕ ಮೌಲ್ಯಗಳನ್ನು, ನಾಗರಿಕ ಪ್ರಜ್ಞೆಗಳನ್ನು, ಪರ್ಯಾವರಣ ಸಂರಕ್ಷಣೆಯ ಅಗತ್ಯತೆಯನ್ನು, ಸಾಮಾಜಿಕ ಸಾಮರಸ್ಯ ಭಾವನೆಯನ್ನು ಮೂಡಿಸಿಕೊಳ್ಳುತ್ತಾ ಮುಂದೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತೇವೆ. ಹಾಗಾಗಿ ಶಾಲೆ ಪಠ್ಯದೊಂದಿಗೆ ಪಠ್ಯಪೂರಕ ಚಟುವಟಿಕೆಗಳಾದ ಸಾಂಸ್ಕøತಿಕ, ಸಾಹಿತ್ಯ, ಕ್ರೀಡೆ ಮತ್ತು ಸಾಂಪ್ರದಾಯಿಕ ಮೌಲ್ಯಗಳ ವೈಜ್ಞಾನಿಕ ಅರಿವನ್ನು ಬೆಳೆಸಬೇಕು’’ ಎಂದು ಅಭ್ಯಾಗತರಾಗಿ ಆಗಮಿಸಿದ ಮನೀಷ್ ಅಡೂರ್ ಇವರು ತಿಳಿಸಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದರು.
ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಸಹ-ಶಿಕ್ಷಕಿಯಾದ ಶ್ವೇತಾ ಇವರು ಪೌರಾಣಿಕ ಹಾಗೂ ಇತಿಹಾಸ ಕಥಾಗುಚ್ಛಗಳೊಂದಿಗೆ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜು, ತೆಂಕಿಲ ಇದರ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಜೊತೆಗೆ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಮುಖ್ಯ ಗುರುಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ಬಳಗದವರು ಉಪಸ್ಥಿತರಿದ್ದ ಕಾರ್ಯಕ್ರಮವನ್ನು ಸಹ-ಶಿಕ್ಷಕಿಯಾದ ಸ್ವಾತಿ ನಿರೂಪಿಸಿದರು.