ಅಂತರಾಷ್ಟ್ರೀಯ ಯೋಗ ದಿನ ಆಚರಣೆ

ವಿದ್ಯಾರ್ಥಿಗಳ ಏಕಾಗ್ರತೆ, ಆರೋಗ್ಯವೃದ್ಧಿಗೆ ಯೋಗ ಉತ್ತಮ ಸಾಧನ -ವಸಂತ ಸುವರ್ಣ


ಶಾಲಾ ಸ್ವಾಸ್ಥ್ಯ ಯೋಗ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದ ಅಭ್ಯಾಗತರೂ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕರೂ ಆದ ವಸಂತ ಸುವರ್ಣರವರು “ ಯೋಗಾಭ್ಯಾಸವು ನಮ್ಮ ದೇಹವನ್ನು ಸದೃಢವಾಗಿರಿಸುತ್ತದೆ ಮತ್ತು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಪ್ರಾಣಾಯಾಮ, ಧ್ಯಾನ ಮತ್ತು ವಿವಿಧ ಆಸನಗಳು ದೇಹಕ್ಕೆ ಚೈತನ್ಯವನ್ನು ನೀಡುತ್ತವೆ. ವಿದ್ಯಾರ್ಥಿಗಳಿಗೆ ಯೋಗ ಅತ್ಯಂತ ಉಪಯುಕ್ತವಾಗಿದೆ ಏಕೆಂದರೆ ಇದು ಏಕಾಗ್ರತೆಯನ್ನು ಹೆಚ್ಚಿಸಿ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಪ್ರತಿದಿನ ಸ್ವಲ್ಪ ಸಮಯ ಯೋಗಕ್ಕೆ ಮೀಸಲಿಟ್ಟರೆ ಒತ್ತಡ ಕಡಿಮೆಯಾಗುತ್ತದೆ. ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರು ಯೋಗವನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಳ್ಳಬೇಕು. ಶಾಲೆಗಳು, ಕಾಲೇಜುಗಳು ಹಾಗೂ ಸಮಾಜದಲ್ಲಿ ಯೋಗದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ” ಎಂದು ಹೇಳಿದರು.

                                 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಯೋಗ ನೃತ್ಯ ಹಾಗೂ ಎಲ್ಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನೆರವೇರಿತು. ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯಗುರು ಆಶಾ ಬೆಳ್ಳಾರೆ, ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಶಾಲಾ ಸ್ವಾಸ್ಥ್ಯ ಸಂಘ ಸಂಯೋಜಕರಾದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನಮಿತಾ ಕೆ ಕೆ ಕಾರ್ಯಕ್ರಮ ನಿರೂಪಿಸಿ, ಅನುರಾಧ ಸ್ವಾಗತಿಸಿ, ವೀಣಾಸರಸ್ವತಿ ಮಾತಾಜಿ ವಂದಿಸಿದರು.

Highslide for Wordpress Plugin