
ಪ್ರಸ್ತುತದ ಸಮಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತಿದ್ದು, ಸ್ಮಾರ್ಟ್ ಬೋರ್ಡ್ ಬಳಸಿ ನಡೆಯುತ್ತಿರುವ ಕಲಿಕಾ ಪ್ರಕ್ರಿಯೆ ಪರಿಣಾಮಕಾರಿ ಮಾಧ್ಯಮವಾಗಿದೆ. ಆ ಮೂಲಕ ಮಕ್ಕಳೇ ಸ್ಮಾರ್ಟ್ ಆಗಿ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ನಾನು ವಿವೇಕಾನಂದ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ನಮ್ಮೀ ಕನ್ನಡ ಶಾಲೆಗೆ ನೀಡಲಾಗುತ್ತಿರುವ ಸಹಕಾರಕ್ಕಾಗಿ ಹೆಮ್ಮೆ ಇದೆ ಎಂದು ಲಯನ್ಸ್ ಜಿಲಾ ಪಿ.ಆರ್.ಒ ವಿ.ಎನ್ ಸುದರ್ಶನ್ ಪಡಿಯಾರ್ ಇವರು ನುಡಿದರು. ವಿವೇಕಾನಂದ ಕನ್ನಡ ಶಾಲೆಗೆ ಪುತ್ತೂರು ಲಯನ್ಸ್ ಕ್ಲಬ್ ವತಿಯಿಂದ ಸ್ಮಾರ್ಟ್ ಬೋರ್ಡ್ ನೀಡಲಾಗಿದ್ದು ಇದರ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಲಯನ್ಸ್ನ ಅಧ್ಯಕ್ಷರಾಗಿರುವ ಪ್ರೇಮಲತಾ ರಾವ್ ಇವರು ಮಾತನಾಡುತ್ತಾ ತಮ್ಮ ಅವಧಿಯಲ್ಲಿ ಶಾಲೆಗೆ ನೀಡುತ್ತಿರುವ ಈ ಕೊಡುಗೆಯು ಪೂರ್ಣಪ್ರಮಾಣದಲ್ಲಿ ಪ್ರಯೋಜನಕಾರಿಯಾಗಲಿದೆ ಆ ಮೂಲಕ ಇನ್ನಷ್ಟು ಇಂತಹ ಕೊಡುಗೆಗಳು ವಿವೇಕಾನಂದ ಕನ್ನಡ ಶಾಲೆಗೆ ದೊರಕಿ ಶಾಲಾ ಪಠ್ಯ-ಪಠ್ಯಪೂರಕ ಚಟುವಟಿಕೆಗಳು ಪ್ರಗತಿ ಹೊಂದಲಿ ಎಂದು ಶುಭ ಹಾರೈಸಿದರು.
ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಇವರು ಲಯನ್ಸ್ ಗವರ್ನರ್, ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳಿಗೆ ಕೃತಜ್ಞತಾ ನಮನ ಸಲ್ಲಿಸಿದರು. ದೀಪ ಪ್ರಜ್ವಲನೆ, ಪುಷ್ಪಾರ್ಚನೆ ಹಾಗೂ ವಿದ್ಯಾರ್ಥಿನಿ ಶ್ರೀರಕ್ಷಾ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಾಲಾ ವೃತಿಕಾ ವಿಜ್ಞಾನ ಸಂಘದ ಸಹಶಿಕ್ಷಕರಾದ ರೇಷ್ಮಾ, ಶುಭಶ್ರೀ, ಶ್ವೇತಾ ಸಂಘಟಿಸಿದರು.
ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ವಸಂತ ಸುವರ್ಣ, ಲಯನ್ಸ್ ಕಾರ್ಯದರ್ಶಿಗಳಾದ ಅರವಿಂದ ಭಗವಾನ್ ರೈ, ಒರಿಜಿ ಝೋನ್ ಅಡ್ವೈಸರ್ ಸದಾಶಿವ ನಾಯಕ್, ಜಿಲ್ಲಾ ಚೇರ್ ಪರ್ಸನ್ ವತ್ಸಲಾ ರಾಜ್ಞಿ, ಕೋಶಾಧಿಕಾರಿ ಸುಧಾಕರ್ ಕೆ.ಪಿ, ಸದಸ್ಯರುಗಳಾದ ತ್ರಿವೇಣಿ ಪೆರುವೋಡಿ, ಜಯಶ್ರೀ ಡಿ.ಸಿ, ಆನಂದ ರೈ, ವಿಶ್ವನಾಥ ಗೌಡ, ಅಜಿತ್ ಶೆಟ್ಟಿ , ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ, ಶಾಲಾ ಶಿಕ್ಷಕ- ಸಹಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಪ್ರೌಢ ವಿಭಾಗದ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.