ಶಾಲಾ ವಾರ್ಷಿಕೋತ್ಸವ ’ವಿವೇಕೋತ್ಸವ’ 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರು ದೇಶವನ್ನು ಮುನ್ನಡೆಸಬಲ್ಲರು – ನಳಿನ್

ದೇಶದಲ್ಲಿನ ಮಹಾನ್ ಸಾಧಕರೆಲ್ಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಲ್ಲ. ಪ್ರಧಾನಿ ಮೋದಿ ಗುಜರಾತಿ ಮಾತೃಭಾಷೆ ಗುಜರಾತಿಯಲ್ಲಿ ಕಲಿತರೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಟಾಟಾ ಸಂಸ್ಥೆಯ ಚಂದ್ರಶೇಖರ್ ತಮಿಳುನಾಡಿನ ಮಾತೃಭಾಷೆ ತಮಿಳಿನಲ್ಲಿ ವಿದ್ಯಾಭ್ಯಾಸ ಪಡೆದು ದೇಶದ ಮಹಾನ್ ಸಾಧಕರೆನಿಸಿದ್ದಾರೆ. ಮುಂದೊಂದು ದಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶವನ್ನು ಮುನ್ನಡೆಸಬಲ್ಲ ಶಕ್ತಿಯನ್ನು ಹೊಂದಿದವರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

Vivekotsava 2018 (1)

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಡಿ.16 ರಂದು ನಡೆದ ಶಾಲಾ ವಾರ್ಷಿಕೋತ್ಸವ ವಿವೇಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಇಂಗ್ಲಿಷ್‌ನಲ್ಲಿ ಜ್ಞಾನಿಯಾದರೆ ಜಗತ್ತನ್ನೇ ಗೆಲ್ಲಬಲ್ಲರು ಎಂಬ ಭಾವನೆ ಬಹಳಷ್ಟು ಮಂದಿ ಪೋಷಕರಲ್ಲಿದೆ. ಇಂತ ಭಾವನೆಗಳನ್ನು ಬಿಟ್ಟುಬಿಡಾಬೇಕು. ಕನ್ನಡ ಶಾಲೆಯಲ್ಲಿಯೇ ಕಲಿತು ಮಹಾನ್ ಸಾಧನೆ ಮಾಡಿದವರು ನಮ್ಮ ರಾಜ್ಯದಲ್ಲಿದ್ದಾರೆ. ನಮ್ಮ ಮಾತೃ ಭಾಷೆಗೆ ಆದ್ಯತೆ ನೀಡಬೇಕು. ಕನ್ನಡ ಮಾಧ್ಯಮದಲ್ಲೇ ಕಲಿತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಬೇಕು ಎಂದ ಅವರು ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಬರೀಯ ಪಠ್ಯ ಶಿಕ್ಷಣ ನೀಡುತ್ತಿಲ್ಲ. ಶಿಕ್ಷಣದ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ನೀಡುವುದಲ್ಲದೆ ದೇಶ ಭಕ್ತಿಯ ಉದ್ದೀಪನ ಮಾಡಲಾಗುತ್ತಿದೆ. ಸಂಸ್ಕಾರಯುತ ಶಿಕ್ಷಣದ ಮೂಲಕ ರಾಷ್ಟ್ರಭಕ್ತರ ನಿರ್ಮಾಣ ಸಂಸ್ಥೆಯ ಮೂಲಕ ನಡೆಯುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಬೆಳಗಲು ಪೂರಕವಾದ ಶಿಕ್ಷಣ ನೀಡಿ ಮಕ್ಕಳನ್ನು ಬೆಳೆಸಲಾಗುತ್ತಿದೆ ಎಂದರು.

ಸ್ಮರಣ ಸಂಚಿಕೆ ’ಸಾಹಿತ್ಯ ಮಿತ್ರ’ ವನ್ನು ಬಿಡುಗಡೆ ಮಾಡಿದ ಲೇಖಕ ಎ ಆರ್ ಮಣಿಕಾಂತ್ ಮಾತನಾಡಿ ಸಾಧಿಸುವ ಛಲ ಎಲ್ಲರಲ್ಲಿಯೂ ಆವಶ್ಯಕ. ಆದರೆ ತಮ್ಮ ಸಾಧನೆಯ ಸಮಯದಲ್ಲಿ ಸಂಕಷ್ಟದಲ್ಲಿರುವವರನ್ನು ರಕ್ಷಣೆ ಮಾಡುವುದೇ ನಿಜವಾದ ಸಾಧನೆ. ವಿದ್ಯಾರ್ಥಿಗಳು ತಮ್ಮ ತನವನ್ನು ಇನ್ನೊಬ್ಬರಲ್ಲಿ ಅಳೆದು ನೋಡಬಾರದು. ಪೋಷಕರು ತಮ್ಮ ಮಕ್ಕಳನ್ನು ಇತರ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ, ಇದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಖಿನ್ನತೆಯ ಭಾವನೆ ಮೂಡಿ ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದರು.

Vivekotsava 2018 (9)

Vivekotsava 2018 (8)

Vivekotsava 2018 (10)

Vivekotsava 2018 (2)

Vivekotsava 2018 (3)

Vivekotsava 2018 (4)

Vivekotsava 2018 (5)

Vivekotsava 2018 (6)

Vivekotsava 2018 (7)

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ ಶಿವರಾಮಯ್ಯ ಮಾತನಾಡಿ ಮಕ್ಕಳಿಗೆ ಓದುವ ಸ್ಪರ್ಧೆಗಿಂತ ಸಮಾಜವನ್ನು ಎದುರಿಸಲು ಬೇಕಾದ ಜಾಣ್ಮೆ, ಸಾಮರ್ಥ್ಯವನ್ನು ನೀಡಬೇಕು. ಜೀವನದ ಕಲೆಯನ್ನು ಅನುಭವಿಸಲು ಸಾಧ್ಯವಾಗುವಂತ ಮೌಲ್ಯಗಳನ್ನು ನೀಡುವುದು ಅವಶ್ಯಕ ಎಂದರು.

ಹಿರಿಯ ವಿದ್ಯಾರ್ಥಿನಿ ಅನುಷಾ ಹೆಗ್ಡೆ ಮಾತನಾಡಿ, ನನ್ನ ಜೀವನದ ಯಶಸ್ಸಿನ ದಾರಿ ತೋರಿಸಿರುವುದೇ ವಿವೇಕಾನಂದ ವಿದ್ಯಾಸಂಸ್ಥೆ. ಕನ್ನಡ ಮಾಧ್ಯಮ ಶಾಲೆಯ ವಿದ್ಯಾಭ್ಯಾಸವೇ ನನ್ನ ಸಾಧನೆಯ ಮೆಟ್ಟಿಲು. ನನ್ನಲ್ಲಿದ್ದ ಪ್ರತಿಭೆಗೆ ಸೂಕ್ತವಾದ ಪ್ರೋತ್ಸಾಹ ನೀಡುವ ಮೂಲಕ ಸಾಂಸ್ಕೃತಿಕವಾಗಿ ಬೆಳೆಸಿದ ಸಂಸ್ಥೆ ಇಂದು ನನ್ನನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಿಂಚುವಂತೆ ಮಾಡಿದೆ ಎಂದರು.

ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ ನಾಯಕ್, ಸಂಚಾಲಕ ವಿನೋದ್ ಕುಮಾರ್ ರೈ, ಗುತ್ತು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರಿಕೃಷ್ಣ, ಪ್ರೌಢಶಾಲಾ ಮುಖ್ಯಗುರು ಆಶಾಬೆಳ್ಳಾರೆ, ಪ್ರೌಢಶಾಲಾ ವಿದ್ಯಾರ್ಥಿ ನಾಯಕಿ ಶೈಲಶ್ರೀ, ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ಮಿಥುನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿನಂದನೆ : ಕ್ರೀಡೆ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಯೋಗ ಮೊದಲಾದ ಕ್ಷೇತ್ರಗಳಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಶಾಲಾ ಆಡಳಿತ ಮಂಡಳಿ ಖಜಾಂಚಿ ವಸಂತ ಸುವರ್ಣ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ ವರದಿ ವಾಚಿಸಿದರು. ಶಿಕ್ಷಕಿ ಲೀಲಾವತಿ ಕಾರ್ಯಕ್ರಮ ನಿರೂಪಿಸಿ ಆಡಳಿತ ಮಂಡಳಿ ಸದಸ್ಯ ರಮೇಶ್ಚಂದ್ರ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Highslide for Wordpress Plugin