ಬೆಳ್ಳಿಹಬ್ಬ ಸಮಾರೋಪ : ಪ್ರತಿ ಮಗುವಿನ ಅದ್ಭುತ ಶಕ್ತಿಯನ್ನು ಅರಿಯುವಂತಾಗಬೇಕು – ಸೀತಾರಾಮ ಕೆದಿಲಾಯ

ಮಕ್ಕಳನ್ನು ಕೇವಲ ವ್ಯಕ್ತಿಗಳಾಗಿ ನೋಡುವಂತಾಗಬಾರದು. ಒಂದೊಂದು ಮಗುವಿನಲ್ಲೂ ಅದ್ಭುತ ಶಕ್ತಿ ಅಡಗಿದೆ. ಮನುಷ್ಯ ರೂಪದಲ್ಲಿರುವ ಮಕ್ಕಳನ್ನು ದೇವರ ರೂಪದಲ್ಲಿ ಕಾಣುವಂತಾಗಬೇಕು. ಇಂತಹ ಮನಸ್ಥಿತಿಯನ್ನು ಎಲ್ಲಾ ವಿದ್ಯಾಮಂದಿರಗಳು ಸ್ವೀಕರಿಸಿದಾಗ ದೇಶದಲ್ಲಿ ಹೊಸ ಯುಗ ಆರಂಭವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಹೇಳಿದರು. ಅವರು ಭಾನುವಾರ ನಗರದ ತೆಂಕಿಲದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಸಮಾರೋಪ ಸಮಾರಂಭದಲ್ಲಿ ಹಾಗೂ ವಿವೇಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯೋಗಜ್ಞಾನ, ಮನೋವಿಜ್ಞಾನ, ಆಯುರ್ವೇದದ ಆರೋಗ್ಯ ಜ್ಞಾನದ ಮೂಲಕ ವಿಶ್ವವೇ ಭಾರತದತ್ತ ನೋಡುವಂತಾಗಿದೆ. ದೈವತ್ವ ಸ್ವರೂಪಿ ಮಕ್ಕಳನ್ನು ಸೃಷ್ಟಿಸುವ ಸಂಕಲ್ಪ ಪೋಷಕರು ಮಾಡಿದ್ದೇ ಆದಲ್ಲಿ ವಿಶ್ವಗುರು ಭಾರತವನ್ನು ನೋಡುವ ದಿನಗಳು ದೂರವಿಲ್ಲ ಎಂದರು.

Vivekotsava

Vivekotsava (1)

Vivekotsava (2)

Vivekotsava (3)

Vivekotsava (4)

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಮಾತನಾಡಿ, ಇಂದು ಕನ್ನಡ ಮಾಧ್ಯಮಗಳು ಇಂಗ್ಲಿಷ್ ವ್ಯಾವೋಹದಿಂದ ಕುಸಿಯುತ್ತಿರುವ ಸಂದರ್ಭದಲ್ಲೂ ಅದನ್ನು ಎದುರಿಸಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮುನ್ನಡೆದಿದೆ. ವಿದೇಶ ಸಂಸ್ಕೃತಿಗೆ ಮಾರು ಹೋಗಿರುವ ಈ ಕಾಲಘಟ್ಟದಲ್ಲಿ ಸಂಸ್ಕೃತಿಯನ್ನು ಕಡೆಗಣಿಸುವ ಪ್ರಕ್ರಿಯೆ ನಡೆಯುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಅದನ್ನು ಉಳಿಸಿ ಬೆಳೆಸುವ ಸಂಸ್ಕಾರ ಭರಿತ ಶಿಕ್ಷಣ ಪದ್ಧತಿ, ರಾಷ್ಟ್ರೀಯತೆ ಚಿಂತನೆಯ ಮನೋಭಾವವನ್ನು ಮಕ್ಕಳಲ್ಲಿ ಬಿತ್ತಿ ಸುಶಿಕ್ಷಿತ ಶಿಕ್ಷಣವನ್ನು ಈ ಸಂಸ್ಥೆಯ ಮೂಲಕ ಕೊಡಲಾಗುತ್ತಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಮ್.ಕೃಷ್ಣ ಭಟ್ ’ಸಮರ್ಪಣಾ’ ಸ್ಮರಣಾ ಸಂಚಿಕೆ ಬಿಡುಗಡೆಗೊಳಿಸಿದರು. ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿದರು.

ವೇದಿಕೆಯಲ್ಲಿ ಬೆಳ್ಳಿಹಬ್ಬ ಸಮಿತಿ ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ವಿರೂಪಾಕ್ಷ ಮಚ್ಚಿಮಲೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸತ್ಯಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ, ಪ್ರೌಢಶಾಲಾ ನಾಯಕ ಸಾತ್ವಿಕ್ ಶರ್ಮ ಬಿ.ಎಸ್, ಪ್ರಾಥಮಿಕ ಶಾಲಾ ನಾಯಕ ಆದಿತ್ಯನಾರಾಯಣ ಪಿ.ಎಸ್ ಉಪಸ್ಥಿತರಿದ್ದರು.

ಈ ಸಂದರ್ಭ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಹಿರಿಯರಾದ ವಿಜಯಮ್ಮ, ರವಿಶಂಕರ ಆಚಳ್ಳಿ, ಗೋಪಾಲ ಸೂರಿಕುಮೇರು ಅವರನ್ನು ಗೌರವಿಸಲಾಯಿತು. ಅಲ್ಲದೆ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿವೇಕೋತ್ಸವ 2017-18  ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಅಚ್ಯುತ ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಆಡಳಿತ ಮಂಡಳಿಯ ಸಂಚಾಲಕ ವಿನೋದ್ ಕುಮಾರ್ ರೈ ವಂದಿಸಿ, ಶಿಕ್ಷಕಿಯರಾದ ಭವ್ಯ ಮತ್ತು ಉಮಾಮೋಹನ್ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ವಾರ್ಷಿಕ ವರದಿ ವಾಚಿಸಿದರು.

Highslide for Wordpress Plugin